ಬೆಳಗಾವಿ: ಬೆಳಗಾವಿಯ ಆಟೋನಗರದ ಕೆಎಸ್ಸಿಎ ಮೈದಾನದಲ್ಲಿ ಉದ್ಘಾಟನಾ ಪಂದ್ಯದಲ್ಲೇ ಭಾರತ ಎ ತಂಡ ಶ್ರೀಲಂಕಾ ಎ ತಂಡವನ್ನು ಇನ್ನಿಂಗ್ಸ್ ಹಾಗೂ 205 ರನ್ಗಳ ಬೃಹತ್ ಅಂತರದಿಂದ ಮಣಿಸಿದೆ.
ನಾಲ್ಕುದಿನಗಳ ಕಾಲ ನಡೆಯಬೇಕಿದ್ದ ಅನಧಿಕೃತ ಟೆಸ್ಟ್ ಪಂದ್ಯ ಮೂರೇ ದಿನದಲ್ಲಿ ಮುಕ್ತಾಯಗೊಂಡಿತು. ಮೊದಲೆರಡು ದಿನ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದ ಭಾರತ ಎ ತಂಡ 622 ರನ್ಗಳ ಬೃಹತ್ ಮೊತ್ತ ಕಲೆಹಾಕಿ ಮೊದಲ ಇನಿಂಗ್ಸ್ ಡಿಕ್ಲೇರ್ ಘೋಷಿಸಿಕೊಂಡಿತು. ಭಾರತ ತಂಡದ ಪರ ಅಭಿಮನ್ಯು ಈಶ್ವರನ್ (233) ದ್ವಿಶತಕ, ಪ್ರಿಯಾಂಕ ಪಾಂಚಾಲ್ (155) ಹಾಗೂ ಅನಮೋಲ್ ಪ್ರೀತ್ ಸಿಂಗ್ ಅಜೇಯ (116) ಶತಕ ಮತ್ತು ಎಸ್.ಡಿ.ಲಾಡ್ (76) ಅರ್ಧಶತಕ ಸಿಡಿಸಿ ಸಂಭ್ರಮಿಸಿದರು.
622 ರನ್ಗಳನ್ನು ಹಿಂಬಾಲಿಸಿದ ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತೀಯರ ದಾಳಿಗೆ ಸಿಲುಕಿ 232 ರನ್ಗಳಿಗೆ ಆಲೌಟ್ ಆಯಿತು. ಲಂಕಾ ಪರ ಅನುಭವಿ ನಿರೋಷನ್ ಡಿಕ್ವೆಲ್ಲಾ (103) ಶತಕ ಸಿಡಿಸಿ ಗಮನ ಸೆಳೆದರು.
ಎರಡನೇ ಇನ್ನಿಂಗ್ಸ್ನಲ್ಲು ರನ್ಗಳಿಸಲು ಪರದಾಡಿದ ಲಂಕಾ 185 ರನ್ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಸೋಲುಕಂಡಿತು.
ಬ್ಯಾಟ್ಸಮನ್ಗಳಿಗೆ ಸಹಕಾರಿಸಿದ ಈ ಮೈದಾನ ಬೌಲರ್ಗಳಿಗೂ ಅನುಕೂಲ ಕಲ್ಪಿಸಿದೆ. ಮೂರು ದಿನದಲ್ಲಿ ಒಂದೂವರೆ ದಿನ ಬ್ಯಾಡಿಂಗ್ ಆಡಿದ ಭಾರತ 5 ವಿಕೆಟ್ ಕಳೆದುಕೊಂಡರೆ ಉಳಿದ ಒಂದೂವರೆ ದಿನ ಆಡಿದ ಶ್ರೀಲಂಕಾ 20 ವಿಕೆಟ್ ಕಳೆದುಕೊಂಡಿತು.
ಭಾರತದ ಅದ್ಭುತ ಬೌಲಿಂಗ್ ಮಾಡಿದ ಐಪಿಎಲ್ನ ಮುಂಬೈ ಹೀರೋ ರಾಹುಲ್ ಚಹಾರ್ ಎರಡೂ ಇನ್ನಿಂಗ್ಸ್‌ನಲ್ಲಿ ತಲಾ 4 ವಿಕೆಟ್ ಪಡೆದು ಗಮನ ಸೆಳೆದರು. ಜಯಂತ್ ಯಾದವ್ ಒಟ್ಟು 4, ಶಿವಂ ದುಬೆ 4, ಸಂದೀಪ್ ವಾರಿಯರ್ 4, ರಜಪೂತ್ 2 ವಿಕೆಟ್ ಕಬಳಿಸಿ ಲಂಕಾ ಬ್ಯಾಟ್ಸಮನ್ ಗಳನ್ನು ಕಾಡಿದರು.
ಎರಡನೇ ಹಾಗೂ ಕೊನೆಯ ಅನಧಿಕೃತ ಟೆಸ್ಟ್ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಮೇ 31ರಿಂದ ಆರಂಭವಾಗಲಿದೆ.