ಬೆಳಗಾವಿ: ಮೂರು ದಿನಗಳ ಕಾಲ ನಡೆದ ಐತಿಹಾಸಿಕ ಕಿತ್ತೂರು ಚನ್ನಮ್ಮ ಉತ್ಸವಕ್ಕೆ ನಿನ್ನೆ ರಾತ್ರಿ ಅದ್ದೂರಿ ತೆರೆ ಬಿದ್ದಿದೆ. ಸಮಾರೋಪ ಸಮಾರಂಭದಲ್ಲಿ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಹಾಗೂ ಗುರುಕಿರಣ್ ಸಂಗೀತ ಕಾರ್ಯಕ್ರಮಕ್ಕೆ ಯುವಕರು ಹೆಜ್ಜೆ ಹಾಕಿ ಕಿತ್ತೂರು ಉತ್ಸವಕ್ಕೆ ಇನ್ನಷ್ಟು ಮೆರುಗು ನೀಡಿದರು.
ಜಿಲ್ಲೆಯ ಕಿತ್ತೂರು ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಈ ಉತ್ಸವದಲ್ಲಿ ಕಿತ್ತೂರು ಆಸ್ಥಾನದ ರಾಣಿ ಚನ್ನಮ್ಮನ ಗತವೈಭವ ಸಾರುವ ಹತ್ತಾರು ಕಾರ್ಯಕ್ರಮಗಳ ಆಯೋಜನೆ ಮಾಡಿದ್ದ ಜಿಲ್ಲಾಡಳಿತ ಯಶಸ್ವಿಯಾಗಿ ಈ ಉತ್ಸವ ಮುಗಿಸಿದ್ದಾರೆ. ಬಗೆ ಬಗೆಯ ಕಲಾ ತಂಡಗಳು, ನೂರಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಮಧ್ಯೆ ಕಿತ್ತೂರು ಉತ್ಸವ ಅದ್ಧೂರಿಯಾಗಿ ಸಮಾಪ್ತಿಯಾಗಿದೆ.
ಸತತ ಮಳೆ ಹಾಗೂ ಭೀಕರ ಪ್ರವಾಹದ ಮಧ್ಯೆಯೂ ಈ ಸಲದ ಕಿತ್ತೂರು ಉತ್ಸವದ ಕಳೆ ಕಡಿಮೆಯಾಗದಿರುವುದು ವಿಶೇಷವಾಗಿತ್ತು. ರಾಜ್ಯದ ನಾನಾ ಭಾಗಗಳಿಂದ ಕಲಾ ತಂಡಗಳು ಆಗಮಿಸಿ ಕಿತ್ತೂರು ನೆಲದಲ್ಲಿ ತಮ್ಮ ಕಲೆ ಪ್ರದರ್ಶನ ಮಾಡಿದ್ದು ನೋಡುಗರ ಕಣ್ಮನ ಸೆಳೆಯುವಂತಿತ್ತು.
ಪ್ರತಿ ವರ್ಷ ಕಿತ್ತೂರು ಉತ್ಸವಕ್ಕೆ ರಾಜ್ಯ ಸರ್ಕಾರ 30 ಲಕ್ಷ ಅನುದಾನ ನೀಡುತ್ತಿತ್ತು. ಆದರೆ, ಈ ಬಾರಿಯ ಯಡಿಯೂರಪ್ಪ ಸರ್ಕಾರ 1 ಕೋಟಿ ಅನುದಾನ ನೀಡಿದ್ದು, ಉತ್ಸವಕ್ಕೆ ಮತ್ತಷ್ಟು ಮೆರಗು ಬಂದಂತಾಗಿತ್ತು.