ಬೆಳಗಾವಿ : "ಈ ಬಾರಿಯ ಕಿತ್ತೂರು ಉತ್ಸವವನ್ನು ಅಕ್ಬೋಬರ್ 23ರಿಂದ ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು. ಆ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕನಿಷ್ಠ 3 ಕೋಟಿ ರೂಪಾಯಿ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು" ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಕಿತ್ತೂರಿನಲ್ಲಿಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ಮೂರು ದಿನಗಳ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಕನಿಷ್ಠ ಮೂರು ಕೋಟಿ ರೂಪಾಯಿ ಅನುದಾನದ ಅಗತ್ಯವಿದೆ. ಇದಕ್ಕಾಗಿ ಪ್ರಯತ್ನಿಸಲಾಗುವುದು. ಈಗಾಗಲೇ ಐದು ಕೋಟಿ ರೂಪಾಯಿ ನೀಡುವಂತೆ ಪ್ರಸ್ತಾವನೆ ಕಳುಹಿಸಲಾಗಿದೆ" ಎಂದರು.

ಲೋಕೋಪಯೋಗಿ ಇಲಾಖೆಯಿಂದ ₹5 ಕೋಟಿ ಖರ್ಚು: "ಲೋಕೋಪಯೋಗಿ ಇಲಾಖೆಯಿಂದ ಮುಂದಿನ ಉತ್ಸವದ ವೇಳೆಗೆ ಕನಿಷ್ಠ ಐದು ಕೋಟಿ ರೂಪಾಯಿ ಅನುದಾನವನ್ನು ಕಿತ್ತೂರು ಪಟ್ಟಣದಲ್ಲಿ ಅಭಿವೃದ್ಧಿಗಾಗಿ ವ್ಯಯಿಸಲಾಗುವುದು. ಈ ಹಣದಲ್ಲಿ ವೀರ ಹೋರಾಟಗಾರರ ಭಾವಚಿತ್ರಗಳ ಅನಾವರಣ, ಶೌಚಾಲಯ ನಿರ್ಮಾಣ ಸೇರಿದಂತೆ ವಿವಿಧ ರೀತಿಯ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ. ಉತ್ಸವವನ್ನು ದಸರಾ ಮಾದರಿಯಲ್ಲಿ ಆಚರಿಸಬೇಕೆಂಬುದು ಎಲ್ಲರ ಆಶಯ. ಕಿತ್ತೂರು ಇತಿಹಾಸದ ಮೆರುಗು ಸಾರುವಂತಹ ಛಾಯಾಚಿತ್ರಗಳ ಪ್ರದರ್ಶನವನ್ನು ಮುಂದಿನ ವರ್ಷದಿಂದ ಆರಂಭಿಸಲಾಗುವುದು. ಸ್ಥಳೀಯ ಕಲಾವಿದರಿಗೆ ಹಾಗೂ ನಿರೂಪಕರಿಗೆ ಪ್ರಾಮುಖ್ಯತೆ ನೀಡಬೇಕು" ಎಂದು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ಕಿತ್ತೂರು ಸಮಗ್ರ ಅಭಿವೃದ್ಧಿಗೆ ಯೋಜನೆ: "ಕಿತ್ತೂರು ಅಭಿವೃದ್ಧಿಗೆ ಸಾಕಷ್ಟು ಅನುದಾನ ಖರ್ಚು ಮಾಡಲಾಗಿದೆ. ಆದಾಗ್ಯೂ ನಿರೀಕ್ಷಿತ ಸುಧಾರಣೆ ಕಂಡಿಲ್ಲ. ಆದ್ದರಿಂದ ಸಮಗ್ರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ನಿರ್ದಿಷ್ಟ ಯೋಜನೆ ರೂಪಿಸುವ ಅಗತ್ಯವಿದೆ. ಅಲ್ಲದೇ ಚೆನ್ನಮ್ಮನ ಜನ್ಮಸ್ಥಳ ಖಾಸಗಿಯವರ ಜಾಗ ಆಗಿರುವುದರಿಂದ ಅಭಿವೃದ್ಧಿಗೆ ಸ್ವಲ್ಪ ಹಿನ್ನಡೆಯಾಗಿದೆ. ಆದ್ದರಿಂದ ಚೆನ್ನಮ್ಮನ ಕೋಟೆ ಹಾಗೂ ಜನ್ಮಸ್ಥಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಕಳೆದ 25 ವರ್ಷಗಳಿಂದ ಉತ್ಸವವನ್ನು ಆಚರಿಸಲಾಗುತ್ತಿದೆ. ಪ್ರತಿಬಾರಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಲಹೆಗಳು ಪಾಲನೆಯಾಗಬೇಕು" ಎಂದು ಸತೀಶ್ ಹೇಳಿದರು.
50 ಶೌಚಾಲಯಗಳ ನಿರ್ಮಾಣ, ಕೆರೆ ಅಭಿವೃದ್ಧಿ: "ಕಿತ್ತೂರು ಪ್ರವಾಸಿ ತಾಣವಾಗಿರುವುದರಿಂದ ಲೋಕೋಪಯೋಗಿ ಇಲಾಖೆಯ ವತಿಯಿಂದ 50 ಶೌಚಾಲಯಗಳನ್ನು ನಿರ್ಮಿಸಿ ಕೊಡಲಾಗುವುದು. ಇದಕ್ಕಾಗಿ ಪಟ್ಟಣ ಪಂಚಾಯತಿ ಮತ್ತು ಸ್ಥಳೀಯರು ಸೂಕ್ತ ಜಾಗ ಒದಗಿಸಬೇಕು. ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಐತಿಹಾಸಿಕ ಪ್ರಾಮುಖ್ಯತೆ ಇರುವ ರಣಗಟ್ಟಿ ಕೆರೆ ಅಭಿವೃದ್ಧಿಪಡಿಸಲಾಗುತ್ತದೆ. ಅರ್ಹ ಹಾಗೂ ಪ್ರತಿಭಾವಂತ ಕಲಾವಿದರು ಹಾಗೂ ಸ್ಥಳೀಯರಿಗೆ ಆದ್ಯತೆ ನೀಡಬೇಕು" ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಮಾತನಾಡಿದ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, "ಕೋಟೆಯ ಆವರಣದಲ್ಲಿ ಮಾಹಿತಿ ಫಲಕಗಳ ಅಳವಡಿಕೆ ಮಾಡುವುದರ ಜತೆಗೆ ಧ್ವನಿ-ಬೆಳಕು ಕಾರ್ಯಕ್ರಮವನ್ನು ವಾರದಲ್ಲಿ ಕನಿಷ್ಠ ಎರಡು ಬಾರಿ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಇನ್ನು ಪಟ್ಟಣದ ಪ್ರವೇಶ ಮಾರ್ಗಗಳಲ್ಲಿ ದೊಡ್ಡದಾದ ಫಲಕಗಳನ್ನು ಅಳವಡಿಸಲು ಈಗಾಗಲೇ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೊರಗಿನವರು ಮತ್ತು ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗುವುದು" ಎಂದು ಭರವಸೆ ನೀಡಿದರು.
ಉತ್ಸವಕ್ಕೆ ಐದು ಕೋಟಿ ರೂಪಾಯಿ ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಸಿದ್ಧತೆಗಾಗಿ ಈಗಾಗಲೇ ಸಾರ್ವಜನಿಕರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಹದಿನಾರು ಉಪ ಸಮಿತಿ ರಚಿಸಲಾಗಿದ್ದು, ಎಲ್ಲ ಸಮಿತಿಗಳು ಕಾರ್ಯಪ್ರವೃತ್ತವಾಗಿವೆ. ಕಳೆದ ಬಾರಿಯಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣ, ಕ್ರೀಡೆ, ಕುಸ್ತಿ, ಸೈಕ್ಲಿಂಗ್, ದೋಣಿ ವಿಹಾರ ಸೇರಿದಂತೆ ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಕಿತ್ತೂರಿನ ರಾಜಗುರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, "ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲರೂ ಸಹಕರಿಸಬೇಕು. ಕಿತ್ತೂರು ಕೋಟೆಯ ಗೋಡೆಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು" ಮನವಿ ಮಾಡಿದರು.

ಸಾರ್ವಜನಿಕರ ಸಲಹೆಗಳು: ಕಿತ್ತೂರು ಚೆನ್ನಮ್ಮನವರ ಸಾಹಸಗಾಥೆಯನ್ನು ಪರಿಚಯಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ, ಬಿಚ್ಚುಗತ್ತಿ ಭರಮಣ್ಣ ಸೇರಿದಂತೆ ಇನ್ನುಳಿದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬೆಳಕು ಚೆಲ್ಲಬೇಕು. ಕೋಟೆಯ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಮಾಹಿತಿ ನೀಡಲು ಪ್ರವಾಸಿ ಮಾರ್ಗದರ್ಶಕರನ್ನು ನೇಮಿಸಬೇಕು. ಚೆನ್ನಮ್ಮನ ಜನ್ಮಸ್ಥಳದ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು. ಪಟ್ಟಣ ಸ್ವಚ್ಛತೆ, ವಿದ್ಯುತ್ ದೀಪಾಲಂಕಾರ ಮಾಡಬೇಕು. ಕೋಟೆ ಗೋಡೆ ರಕ್ಷಣೆ ಮಾಡಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಸಲಹೆಗಳನ್ನು ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಸೇರಿದಂತೆ ವಿವಿಧ ಉಪ ಸಮಿತಿಗಳ ಅಧ್ಯಕ್ಷರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಚನ್ನಮ್ಮನ ಕಿತ್ತೂರಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಇದ್ದರು.
ಇದನ್ನೂ ಓದಿ: ಕಿತ್ತೂರು ಉತ್ಸವಕ್ಕೆ 5 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಕಳಿಸಲು ನಿರ್ಧಾರ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ