ಬೆಳಗಾವಿ: ರಸ್ತೆ ದಾಟಲು ಪರದಾಡುತ್ತಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞರ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿರುವ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಓಲಮನಿ ಗ್ರಾಮದಲ್ಲಿ ನಡೆದಿದೆ.
ಜಾಂಬೋಟಿ-ಜತ್ತ ರಾಜ್ಯ ಹೆದ್ದಾರಿಯಲ್ಲಿ 15 ಅಡಿ ಉದ್ದದ ಕಾಳಿಂಗ ಸರ್ಪವೊಂದು ರಸ್ತೆ ದಾಟಲು ಪರದಾಡುತ್ತಿತ್ತು. ಈ ವೇಳೆ ಬೃಹತ್ ಸರ್ಪವನ್ನು ಕಂಡ ಗ್ರಾಮಸ್ಥರು ಸಂಚಾರ ಸ್ಥಗಿತಗೊಳಿಸಿದ್ದರು. ಬಳಿಕ ಖ್ಯಾತ ಉರಗ ತಜ್ಞರಾದ ಬೆಳಗಾವಿ ತಾಲೂಕಿನ ಕಿಣಯೆ ಗ್ರಾಮದ ಭಜರಂಗ ಡುಕರೆ ಹಾಗೂ ನಿಂಗಪ್ಪ ಅವರಿಗೆ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿದರು. ಇಬ್ಬರೂ ಸೇರಿ ಕಾಳಿಂಗ ಸರ್ಪವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
15 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಿಸುವ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ. ಕಾಳಿಂಗ ಸರ್ಪವನ್ನು ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.