ಬೆಳಗಾವಿ: ಕನ್ನಡ ರಾಜ್ಯೋತ್ಸವ ಕಳೆಗಟ್ಟಿದೆ. ಕುಂದಾನಗರಿ ಬೆಳಗಾವಿಯಲ್ಲಿ ಸಂಭ್ರಮ ಜೋರಾಗಿದೆ. ರಾಜ್ಯೋತ್ಸವಕ್ಕೆ ಟೀಶರ್ಟ್ಗಳ ಖರೀದಿ ಭರಾಟೆ ಹೆಚ್ಚಾಗಿದ್ದು, ಕನ್ನಡ ನಾಡು, ನುಡಿ ಕುರಿತು ಜಾಗೃತಿ ಜೊತೆ ಕನ್ನಡಾಭಿಮಾನ ಮೂಡಿಸುವ ಟೀಶರ್ಟ್ಗಳ ಖರೀದಿಗೆ ಕನ್ನಡಮ್ಮನ ಕಂದಮ್ಮಗಳು ಮುಗಿ ಬಿದ್ದಿದ್ದಾರೆ. ಬೆಳಗಾವಿಯಿಂದ ಲಂಡನ್ಗೂ ಟೀಶರ್ಟ್ ಕಳಿಸಿದ್ದು ವಿಶೇಷವಾಗಿದೆ.
ಇಡೀ ರಾಜ್ಯದಲ್ಲಿ ರಾಜ್ಯೋತ್ಸವ ಆಚರಣೆ ಒಂದೆಡೆಯಾದರೆ, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಆಚರಿಸುವ ರಾಜ್ಯೋತ್ಸವ ತುಂಬಾ ವಿಶೇಷವಾಗಿಯೇ ಇರುತ್ತದೆ. ಅಷ್ಟೊಂದು ಸಂಭ್ರಮ, ಸಡಗರದಿಂದ ಇಲ್ಲಿ ರಾಜ್ಯೋತ್ಸವ ಆಚರಿಸಲಾಗುತ್ತದೆ. ಅಲ್ಲದೇ ರಾಜ್ಯೋತ್ಸವಕ್ಕೆ ಮೆರಗು ತರುವ ಕನ್ನಡ ಬರಹಗಳ ಟೀಶರ್ಟ್ಗಳು ಇಲ್ಲಿನ ರಾಣಿ ಚೆನ್ನಮ್ಮ ವೃತ್ತದ ಬಳಿಯ ಕನ್ನಡ ಸಾಹಿತ್ಯ ಭವನದಲ್ಲಿ ಗಮನ ಸೆಳೆಯುತ್ತಿವೆ.
ಬೆಳಗಾವಿಯಿಂದ ಲಂಡನ್ಗೆ ಹೋದ ಟೀಶರ್ಟ್: "ಬೆಳಗಾವಿ ಪುಟ" ಫೇಸ್ಬುಕ್ ಪೇಜ್ ವತಿಯಿಂದ ಪ್ರತಿವರ್ಷವೂ ಆಕರ್ಷಕ ಬರಹಗಳ ಟೀಶರ್ಟ್ ಮಾರಾಟ ಮಾಡಲಾಗುತ್ತಿದೆ. ಈ ಬಾರಿ "ಲೇ ಬರಬ್ಯಾಡ್ರಿ ಬೆಳಗಾವಿ ಕೇಳಾಕ, ಇಲ್ಲಿ ಕನ್ನಡಿಗರು ಬಾಳ ಖಡಕ್" ಬರಹದ ಜೊತೆಗೆ ಕನ್ನಡ ಕುಲ ತಿಲಕ, ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ ಅವರ ಭಾವಚಿತ್ರ ಇರುವ ಬಿಳಿ ಟೀಶರ್ಟ್ ಗಮನ ಸೆಳೆಯುತ್ತಿದೆ. ಈ ಟೀಶರ್ಟ್ಗಳ ಖರೀದಿಗೆ ಯುವಕರು ನಾ ಮುಂದು, ತಾ ಮುಂದು ಎನ್ನುತ್ತಿದ್ದಾರೆ. ಈ ಹಿಂದೆ "ಯಾರಪ್ಪಂದ ಏನೈತಿ, ಬೆಳಗಾವಿ ನಮ್ಮದೈತಿ", "ಅಪ್ಪು ಗತ್ತು ದೇಶಕ್ಕೆ ಗೊತ್ತು" ಎಂಬ ಬರಹದ ಟೀಶರ್ಟ್ಗಳು ರಾಜ್ಯೋತ್ಸವಕ್ಕೆ ಸದ್ದು ಮಾಡಿದ್ದವು. ಬೆಳಗಾವಿ ಪುಟದಿಂದ ಈ ಸಲ ಎರಡು ಟೀಶರ್ಟ್ ಸಪ್ತಸಾಗರದಾಚೆ ದಾಟಿ ಲಂಡನ್ಗೂ ಕಳಿಸಲಾಗಿದೆ. ವಿಮಾನದ ಮೂಲಕ ಬೆಂಗಳೂರಿನಿಂದ ನೇರವಾಗಿ ಲಂಡನ್ಗೆ ಈ ಟೀಶರ್ಟ್ ಕಳಿಸಲಾಗಿದೆ.
ಈ ಕುರಿತು ಬೆಳಗಾವಿ ಪುಟ ಫೇಸ್ಬುಕ್ ಪೇಜ್ ಅಡ್ಮಿನ್ ಕಿರಣ ಮಾಳನ್ನವರ ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿ, ''ರಾಜ್ಯೋತ್ಸವ ಅಂಗವಾಗಿ ಕಳೆದ ಏಳು ವರ್ಷಗಳಿಂದ ನಮ್ಮ ಪುಟದ ವತಿಯಿಂದ ಒಂದಿಲ್ಲೊಂದು ವಿಶೇಷ ಟ್ಯಾಗ್ ಲೈನ್, ಟೀಶರ್ಟ್, ರ್ಯಾಪ್ ಸಾಂಗ್ ಮಾಡುತ್ತಿದ್ದೇವೆ. ಕಳೆದ ವರ್ಷ ಅಪ್ಪು ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿತ್ತು. ಈ ಬಾರಿ ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಗೌರವ ಸಲ್ಲಿಸುತ್ತಿದ್ದೇವೆ. ಬೇರೆ ಬೇರೆ ಜಿಲ್ಲೆ, ರಾಜ್ಯ ಸೇರಿದಂತೆ ಲಂಡನ್ಗೂ ಟೀಶರ್ಟ್ ಕಳಿಸಿಕೊಟ್ಟಿದ್ದೇವೆ. ಅಲ್ಲದೇ ಪುಲಿಕೇಶಿ ಮಹಾರಾಜರ ಆನ್ಲೈನ್ ಚಿತ್ರ ಬಿಡಿಸುವ ಸ್ಪರ್ಧೆ, ಬೆಳಗಾವಿ ರಾಜ್ಯೋತ್ಸವದ ಕುರಿತು ಕವನ ಬರೆಯುವ ಸ್ಪರ್ಧೆ ಆಯೋಜಿಸಿದ್ದೇವೆ. ಅಲ್ಲದೇ ರಾಜ್ಯೋತ್ಸವಕ್ಕೆ ಆಗಮಿಸುವವರಿಗೆ ಪುಲಿಕೇಶಿ ಅವರ ಬ್ಯಾಡ್ಜ್ಅನ್ನೂ ಸಹ ಉಚಿತವಾಗಿ ವಿತರಿಸುತ್ತಿದ್ದೇವೆ'' ಎಂದು ವಿವರಿಸಿದರು.
ಅದೇ ರೀತಿ ಬೇರೆ ಬೇರೆ ಸಂಘಟನೆಯವರ "ಕಾವೇರಿ ಕೊಡುದಿಲ್ಲ, ಬೆಳಗಾವಿ ಬಿಡುದಿಲ್ಲ", "ಚೆನ್ನಮ್ಮನ ಛಲ ಐತಿ, ರಾಯಣ್ಣನ ಬಲ ಐತಿ, ಬೆಳಗಾವಿ ನಮ್ಮ್ದೈತಿ", "ಬೆಳಗಾವಿ ಕನ್ನಡಿಗ, ಬೆಳಗಾವಿ ಕನ್ನಡತಿ", "ನಾನಿನ್ನ ಮರೆಯಲಾರೆ" ಎಂಬ ಬರಹಗಳ ಟೀಶರ್ಟ್ಗಳನ್ನೂ ಜನ ಖರೀದಿಸುತ್ತಿದ್ದಾರೆ ಎಂದರು.
ನಾವೆಲ್ಲಾ ತುಂಬಾ ಉತ್ಸುಕರಾಗಿದ್ದೇವೆ: ಟೀಶರ್ಟ್ ಖರೀದಿಗೆ ಬಂದಿದ್ದ ಯುವತಿ ಅಮೃತಾ ಮಾತನಾಡಿ, ''ಬೆಳಗಾವಿಯಲ್ಲಿ ರಾಜ್ಯೋತ್ಸವ ತುಂಬಾ ಖಡಕ್ ಇರುತ್ತೆ. ಇಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ರಾಜ್ಯೋತ್ಸವದಲ್ಲಿ ಭಾಗಿಯಾಗಲು ನಾವೆಲ್ಲಾ ತುಂಬಾ ಉತ್ಸುಕರಾಗಿದ್ದೇವೆ. ಟೀಶರ್ಟ್ ಖರೀದಿಸಿ ರಾಜ್ಯೋತ್ಸವಕ್ಕೆ ಸಜ್ಜಾಗುತ್ತಿದ್ದು, ಎಲ್ಲರೂ ನವೆಂಬರ್ 1ಕ್ಕೆ ಬೆಳಗಾವಿಗೆ ಬನ್ನಿ'' ಎಂದು ಕರೆ ನೀಡಿದರು.
ಮತ್ತೋರ್ವ ಯುವತಿ ಸುಕನ್ಯಾ ಮಾತನಾಡಿ, ''ನಾವು ಬೆಳಗಾವಿ ಅವರೇ. ಆದರೆ, ವಸತಿ ನಿಲಯದಲ್ಲಿ ಇದ್ದಿದ್ದರಿಂದ ಎಷ್ಟೋ ಬಾರಿ ರಾಜ್ಯೋತ್ಸವ ಆಚರಿಸಲು ನಮಗೆ ಸಾಧ್ಯ ಆಗಿರಲಿಲ್ಲ. ಈ ಬಾರಿ ನಮಗೆ ಅವಕಾಶ ಸಿಕ್ಕಿದ್ದು, ಟೀಶರ್ಟ್ ಖರೀದಿಗೆ ಬಂದಿದ್ದೇವೆ. ಲೇ ಬರಬ್ಯಾಡ್ರಿ ಬೆಳಗಾವಿ ಕೇಳಾಕ, ಇಲ್ಲಿ ಕನ್ನಡಿಗರು ಬಾಳ ಖಡಕ್. ಸೋ ಬೆಳಗಾವಿ ಕೇಳಾಕ ಯಾರೂ ಬರಬ್ಯಾಡ್ರಿ, ಬೆಳಗಾವಿ ನಮ್ಮದೈತಿ, ರಾಜ್ಯೋತ್ಸವಕ್ಕ ಎಲ್ಲಾರೂ ಬರ್ರಿ'' ಎಂದು ಮನವಿ ಮಾಡಿದರು.
ಹಳದಿ-ಕೆಂಪು ಬಣ್ಣದ ಕನ್ನಡ ಬಾವುಟಗಳು, ಶಾಲುಗಳು, ಬ್ಯಾಡ್ಜ್, ಭುವನೇಶ್ವರಿ ದೇವಿ, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ. ಪುನೀತ್ ರಾಜಕುಮಾರ್ ಅವರ ಭಾವಚಿತ್ರದ ಧ್ವಜಗಳನ್ನು ಕೂಡ ಜನ ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಬೆಳಗಾವಿಯಲ್ಲಿ ರಾಜ್ಯೋತ್ಸವಕ್ಕೆ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗಿದ್ದು, ಅದ್ಧೂರಿ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ.
ಇದನ್ನೂ ಓದಿ: ಕನ್ನಡ ಧ್ವಜಕ್ಕೆ ಶಾಸನಬದ್ಧ ಸ್ಥಾನಮಾನ ವಿಚಾರ: ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಭೀಮಪ್ಪ ಗಡಾದ