ಬೆಳಗಾವಿ: ಗಡಿಜಿಲ್ಲೆ ಬೆಳಗಾವಿಯಲ್ಲಿ ಮೂರು ವರ್ಷಗಳ ಬಳಿಕ ಇಂದು ಅತೀ ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗಿದೆ.
ಕೊರೋನಾ ಕಾರಣದಿಂದಾಗಿ ಕಳೆದ ಮೂರು ವರ್ಷಗಳಿಂದ ರಾಜ್ಯೋತ್ಸವವನ್ನು ನಿರ್ಬಂಧಿಸಲಾಗಿತ್ತು. ಮೂರು ವರ್ಷಗಳ ಬಳಿಕ ಇಂದು ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸಲಾಗಿದೆ. ಕುಂದಾನಗರಿಯಲ್ಲಿ ನಿನ್ನೆ 12 ಗಂಟೆಯಿಂದಲೇ ಸಂಭ್ರಮಾಚರಣೆ ಆರಂಭಿಸಲಾಗಿದ್ದು, ಚನ್ನಮ್ಮ ವೃತ್ತದಲ್ಲಿ ಮಧ್ಯರಾತ್ರಿ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೇಕ್ ಕಟ್ ಮಾಡಿ ಚಾಲನೆ ರಾಜ್ಯೋತ್ಸವಕ್ಕೆ ನೀಡಲಾಯಿತು.
ಬೆಳಗ್ಗೆ 10.30ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಪೂಜೆ ಸಲ್ಲಿಸಿ ಬಳಿಕ ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಸಂದೇಶ ನೀಡಿದರು. ಈ ವೇಳೆ ಬೆಳಗಾವಿ ಬಿಜೆಪಿ ಸಂಸದೆ ಮಂಗಳಾ ಅಂಗಡಿ, ಬಿಜೆಪಿ ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ್, ಡಿಸಿ ನಿತೇಶ್ ಪಾಟೀಲ್, ಎಸ್‌ಪಿ ಡಾ.ಸಂಜೀವ್ ಪಾಟೀಲ್, ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಜಿ.ಪಂ.ಸಿಇಒ ದರ್ಶನ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಇದೇ ವೇಳೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೆಳಗಾವಿಯ 14 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದಾದ ಬಳಿಕ ನೂರಕ್ಕೂ ಹೆಚ್ಚು ರೂಪಕ ವಾಹನಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು. ರಾಜ್ಯೋತ್ಸವ ಮೆರವಣಿಗೆಯಲ್ಲಿ ಅಪ್ಪು ಫೋಟೋಗಳು ರಾರಾಜಿಸುತ್ತಿದ್ದವು. ಕೈಯಲ್ಲಿ ಅಪ್ಪು ಫೋಟೋ, ಮೈ ಮೇಲೆ ಅಪ್ಪು ಚಿತ್ರದ ಟೀ ಶರ್ಟ್. ಅಪ್ಪು ಗತ್ತು ದೇಶಕ್ಕೆ ಗೊತ್ತು.. ಬೆಳಗಾವಿ ಎಂದೆಂದೂ ಕನ್ನಡಿಗರ ಸ್ವತ್ತು ಎಂಬ ಬರಹದ ಟೀಶರ್ಟ್ ತೊಟ್ಟು ಅಭಿಮಾನಿಗಳು ಸಂಭ್ರಮಿಸಿದರು. ಅಲ್ಲದೇ 10 ಸಾವಿರ ಅಡಿ ಉದ್ದದ ಕನ್ನಡ ಬಾವುಟ ಹಿಡಿದು ಸುಮಾರು ಮೂರು ಕಿಲೋಮೀಟರ್‌ವರೆಗೆ ಯುವಕರು ಹೆಜ್ಜೆ ಹಾಕಿದರು.
ಒಂದು ಲಕ್ಷ ಹೋಳಿಗೆ ದಾಸೋಹ: ಇನ್ನು ಈ ಬಾರಿಯ ರಾಜ್ಯೋತ್ಸವಕ್ಕೆ ಹುಕ್ಕೇರಿ ಹಿರೇಮಠ ವತಿಯಿಂದ ಒಂದು ಲಕ್ಷ ಹೋಳಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿದ ಲಕ್ಷಾಂತರ ಜನರಿಗೆ ಹೋಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ನೇತೃತ್ವದಲ್ಲಿ ನೆರವೇರಿದ ಹೋಳಿಗೆ ದಾಸೋಹ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಡೈಲಾಗ್ ಕಿಂಗ್ ಸಾಯಿ ಕುಮಾರ್ ಅಭಿಮಾನಿಗಳಿಗೆ ಹೋಳಿಗೆ ಊಟ ಬಡಿಸಿದರು.
ಇದೇ ವೇಳೆ ಮಾತನಾಡಿದ ನಟ ಸಾಯಿಕುಮಾರ್, 'ಕರ್ನಾಟಕ ಇಲ್ಲ ಅಂದ್ರೆ ನಾನಿಲ್ಲ. ನಿಮಗೆಲ್ಲ ಗೊತ್ತು ನನ್ನ ಮಾತೃಭಾಷೆ ತೆಲುಗು. ಆದರೆ ನನ್ನ ಜೀವನ ಭಾಷೆ ಕನ್ನಡ. ಕರ್ನಾಟಕ ಸರ್ಕಾರ ಇಂದು ಪುನೀತ್ ರಾಜಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವ ಹಿನ್ನೆಲೆ ಸರ್ಕಾರಕ್ಕೆ ನಟ ಅಭಿನಂದನೆಗಳನ್ನು ಸಲ್ಲಿಸಿದ್ದರು.
ಇನ್ನು ಪ್ರತಿವರ್ಷದಂತೆ ಈ ವರ್ಷವೂ ಎಂಇಎಸ್ ಕರಾಳ ದಿನ ಮೆರವಣಿಗೆ ನಡೆಸಿ ನಾಡದ್ರೋಹಿ ಘೋಷಣೆ ಕೂಗಿ ಮೆರವಣಿಗೆ ಮೂಲಕ ಮರಾಠಾ ಮಂದಿರಕ್ಕೆ ತೆರಳಿ ಪ್ರತಿಭಟನಾ ಸಭೆ ಮಾಡಿದ್ದಾರೆ.
ಇದನ್ನೂ ಓದಿ: 67 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ.. ಇದೇ ಮೊದಲ ಬಾರಿಗೆ 5 ಲಕ್ಷ ನಗದು, 25 ಗ್ರಾಂ ಬಂಗಾರ, ಪ್ರಶಸ್ತಿ ಫಲಕ