ಅಥಣಿ(ಬೆಳಗಾವಿ): ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ್ ಅವರಿಗೆ ಶೀಘ್ರದಲ್ಲೇ ಶುಭ ಸುದ್ದಿ ಬರಲಿದೆ ಎಂದು ಮಾಜಿ ಸಚಿವ, ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ. ಗುರುವಾರ ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಸಚಿವ ಸ್ಥಾನ ಬೇಡ ಎಂದು ನನ್ನ ಬಳಿ ಮನವಿ ಮಾಡಿದ್ದಾರೆ. ಅಥಣಿ ಕ್ಷೇತ್ರಕ್ಕೆ ನೀರಾವರಿ ಯೋಜನೆಗಳನ್ನು ನೀಡಿ, ಸಂಪೂರ್ಣ ಕ್ಷೇತ್ರವನ್ನು ನೀರಾವರಿ ಮಾಡಿ ಅಂತ ಹೇಳಿಕೊಂಡಿದ್ದಾರೆ. ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ್ ಅವರಿಗೆ ಶೀಘ್ರದಲ್ಲೇ ಶುಭ ಸುದ್ದಿ ಬರಲಿದೆ ಎನ್ನುವ ಮೂಲಕ ಪರೋಕ್ಷವಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ಸೂಚನೆ ನೀಡಿದರು.
ಅಹಿಂದ ಸಮಾವೇಶ ಆಯೋಜನೆ: ಮುಂದಿನ ಎರಡ್ಮೂರು ತಿಂಗಳಲ್ಲಿ ಬೃಹತ್ ಅಹಿಂದ ಸಮಾವೇಶ ಆಯೋಜನೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಆಹ್ವಾನಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಅಲ್ಲದೇ, ಈ ಸಮಾವೇಶವನ್ನು ಗೋಕಾಕನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಪೂರ್ವಭಾವಿ ಸಭೆಗಳಲ್ಲಿ ತೊಡಗಿದ್ದೇನೆ. ಅಮಿತ್ ಶಾ ಅವರ ಎರಡು ಕಾರ್ಯಕ್ರಮಗಳನ್ನು ಆಯೋಜಿಸಲು ಯೋಚಿಸಲಾಗಿದೆ. ಜೊತೆಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ವಿಧಾನಸಭಾ ಚುನಾವಣೆ ಎದುರಿಸುತ್ತೇವೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಇನ್ಮುಂದೆ ಮಾಧ್ಯಮಗೋಷ್ಟಿ ಮಾಡುವುದಿಲ್ಲ: ನನಗೆ ಹೇಳಲು ತುಂಬಾ ವಿಷಯಗಳಿವೆ. ಆದರೆ, ನಾನು ರಾಷ್ಟ್ರೀಯ ಪಕ್ಷದಲ್ಲಿ ಇರುವುದರಿಂದ ಹೈಕಮಾಂಡ್ ಆದೇಶದಂತೆ ಕೆಲಸ ಮಾಡಬೇಕಾಗುತ್ತದೆ. ಅದಕ್ಕಾಗಿ ಎರಡು ಬಾರಿ ಮಾಧ್ಯಮಗೋಷ್ಟಿ ನಡೆಸಿಲ್ಲ. ಇನ್ಮುಂದೆಯೂ ಕೂಡಾ ಮಾಧ್ಯಮಗೋಷ್ಟಿ ಮಾಡುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ಇದನ್ನೂ ಓದಿ: ಬಸವರಾಜ್ ಹೊರಟ್ಟಿ ಬಿಜೆಪಿ ಸೇರ್ಪಡೆ ಹೇಳಿಕೆ, ಸಭಾಪತಿ ಪೀಠಕ್ಕೆ ಮಾಡಿದ ಅಪಚಾರ: ಬಿ.ಕೆ.ಹರಿಪ್ರಸಾದ್ ಟೀಕೆ