ಅಥಣಿ(ಬೆಳಗಾವಿ): ದೇಶದಲ್ಲಿ 36 ಸಾವಿರ ದೇವಸ್ಥಾನಗಳನ್ನ ಪುಡಿ ಮಾಡಿ ಮಸೀದಿಗಳನ್ನ ಕಟ್ಟಲಾಗಿದೆ. ಪುಡಿ ಮಾಡಿದ ಒಂದೇ ಒಂದು ಮಸೀದಿಯನ್ನು ನಾವು ಬಿಡಲ್ಲ. 36 ಸಾವಿರ ದೇವಸ್ಥಾನಗಳನ್ನ ಮರು ನಿರ್ಮಾಣ ಮಾಡುತ್ತೇವೆ ಎಂದು ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಅವರು ಹೇಳಿದ್ದಾರೆ.
ತಾಲೂಕಿನ ತೆಲಸಂಗ ಗ್ರಾಮದ ಶ್ರೀ ವಿಠಬಾಯ ದೇವರ ಜಾತ್ರೆ ಮಹೋತ್ಸವದಲ್ಲಿ ಭಾಗವಹಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಮಳಲಿ ಮಸೀದಿ ಒಂದೇ ಅಲ್ಲ, 36 ಸಾವಿರ ದೇವಸ್ಥಾನಗಳನ್ನ ಕೆಡವಿ ಮಸೀದಿ ಕಟ್ಟಿಸಿದ್ದಾರೆ. ಮಸೀದಿ ಕಟ್ಟಲು ನಮ್ಮದು ಯಾವುದೇ ಅಭ್ಯಂತರ ಇಲ್ಲ. ಆದರೆ, ಹಿಂದೂ ದೇವಸ್ಥಾನ ಕೆಡವಿ ಕಟ್ಟಿರೋದನ್ನ ನಾವು ಬಿಡಲ್ಲಾ, ಉಳಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ಈಗಾಗಲೇ ತೀರ್ಪು ಬಂದಿದೆ. ಕಾಶಿಯಲ್ಲೂ ಸರ್ವೆ ನಡೆಯುತ್ತಿದೆ. ಕಾಶಿಯಲ್ಲೂ ಹಿಂದೂ ದೇವಾಲಯದ ಮೇಲೆ ಮಸೀದಿ ಕಟ್ಟಲಾಗಿದೆ. ಕಾನೂನು ಬದ್ಧವಾಗಿ ಕೋರ್ಟ್ ಆರ್ಡರ್ ಪಡೆದು ಎಲ್ಲವನ್ನೂ ಸರಿ ಮಾಡುತ್ತೇನೆ ಎಂದು ಹೇಳಿದರು.
ಲಕ್ಷ್ಮಣ್ ಸವದಿ ಆದಷ್ಟು ಬೇಗನೆ ಮತ್ತೆ ಡಿಸಿಎಂ ಆಗಲಿ: ಲಕ್ಷಣ್ ಸವದಿ ನನ್ನ ಆತ್ಮೀಯ ಸ್ನೇಹಿತ. ಅವರು ಉಪ ಮುಖ್ಯಮಂತ್ರಿ ಆಗಲಿ ಎಂದು ಮನಸ್ಸಿನ ಭಾವನೆ ವ್ಯಕ್ತಪಡಿಸಿದ್ದೇನೆ. ಅವರು ಡಿಸಿಎಂ ಆಗಲಿ ಎಂಬುದು ನನ್ನ ಆಸೆ ಎಂದು ತಿಳಿಸಿದರು.
ಮತ್ತೆ ಯಾವಾಗ ನೀವು ಸಚಿವರು ಆಗುವುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಭಗವಂತ ಬಯಸಿದಾಗ ನಾನು ಮತ್ತೆ ಮಂತ್ರಿಯಾಗೋದು ಎಂದು ಹತಾಶೆ ಭಾವದಿಂದ ಪ್ರತಿಕ್ರಿಯೆ ನೀಡಿದರು.