ಬೆಂಗಳೂರು: ರಾಜ್ಯದಲ್ಲಿನ ಅನುದಾನಿತ ಶಾಲಾ - ಕಾಲೇಜುಗಳಲ್ಲಿ ಸೇವೆ ಸಲ್ಲಿಸುವ ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಿಸುವ ಕುರಿತಂತೆ ರಾಜ್ಯದ ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜ್ಯೋತಿ ಸಂಜೀವಿನಿ ಯೋಜನೆ: ವಿಧಾನ ಪರಿಷತ್‌ನಲ್ಲಿ ಸದಸ್ಯೆ ಹೇಮಲತಾ ನಾಯಕ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರವು ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರುಗಳಿಗೆ ನಿರ್ದಿಷ್ಟವಾಗಿ ಏಳು ಮಾರಣಾಂತಿಕ ಕಾಯಿಲೆಗಳಾದ ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡ ಚಿಕಿತ್ಸೆಗಳು, ನವಜಾತ ಶಿಶು ಹಾಗೂ ಚಿಕ್ಕಮಕ್ಕಳ ಕಾಯಿಲೆ, ಸುಟ್ಟಗಾಯ ಮತ್ತು ಅಪಘಾತಗಳಿಗೆ ಸಂಬಂಧಿಸಿದಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ದಿಂದ ನೆಟ್‌ವರ್ಕ್ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಸರ್ಕಾರಿ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಜ್ಯೋತಿ ಸಂಜೀವಿನಿ ಯೋಜನೆಯನ್ನು 2015ರಿಂದ ಜಾರಿಗೊಳಿಸಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಈ ಯೋಜನೆಯನ್ನು ಸರ್ಕಾರಿ ನೌಕರರಿಗೆ ಮಾತ್ರ ರೂಪಿಸಲಾಗಿದೆ. ಯಾವುದೇ ಅನುದಾನಿತ ನೌಕರರು ಯೋಜನೆ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೂ ಜ್ಯೋತಿ ಸಂಜೀವಿನಿ ಯೋಜನೆ ಅನುದಾನಿತ ನೌಕರರಿಗೆ ವಿಸ್ತರಿಸುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯದಲ್ಲಿ ಅನುದಾನಿತ ಒಟ್ಟು 2686 ಪ್ರಾಥಮಿಕ ಶಾಲೆಗಳಲ್ಲಿ 11,677 ನೌಕರರು, 3756 ಪ್ರೌಢಶಾಲೆಗಳಲ್ಲಿ 24,383 ನೌಕರರು ಹಾಗೂ 821 ಪದವಿ ಪೂರ್ವ ಕಾಲೇಜುಗಳಲ್ಲಿ 5848 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಈ ಅನುದಾನಿತ ನೌಕರರನ್ನು ಈ ಯೋಜನೆ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಜಲದುರ್ಗ ಕೋಟೆ ಸಂರಕ್ಷಣೆಗೆ ಪ್ರಸ್ತಾವ ಬಂದಲ್ಲಿ ಅನುದಾನ: ರಾಯಚೂರು ಜಿಲ್ಲೆಯ ಜಲದುರ್ಗ ಐತಿಹಾಸಿಕ ಕೋಟೆಗೆ ಯಾವುದೇ ಅನುದಾನ ನಿಗದಿಪಡಿಸಿರುವುದಿಲ್ಲ. ಜಲದುರ್ಗ ಐತಿಹಾಸಿಕ ಕೋಟೆಯ ಜೀರ್ಣೋದ್ಧಾರಕ್ಕೆ ಪ್ರಸ್ತಾವನೆ ಸ್ವೀಕೃತಗೊಂಡಲ್ಲಿ ವಿಸ್ತೃತ ಯೋಜನಾ ವರದಿಯೊಂದಿಗೆ ಅನುದಾನ ಒದಗಿಸುವ ಕುರಿತು ಪರಿಶೀಲಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ ಹೇಳಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಶರಣಗೌಡ ಬಯ್ಯಾಪುರ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, 2013-14ನೇ ಸಾಲಿನ 13ನೇ ಹಣಕಾಸಿನ ಯೋಜನೆಯಡಿ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಐತಿಹಾಸಿಕ ಮುದಗಲ್ ಕೋಟೆಯ ಸಂರಕ್ಷಣಾ ಕಾಮಗಾರಿಯನ್ನು 50 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾಗಿದೆ ಎಂದರು.
ಕೋಟೆಯ ಗೋಡೆಯ ಸಂರಕ್ಷಣಾ ಕಾಮಗಾರಿ ಹಾಗೂ ಕಾಂಕ್ರೀಟ್ ಚೈನ್ಲಿಂಕ್ ಫೆನ್ಸಿಂಗ್ ಕಾಮಗಾರಿಗಳ ಕೆಲಸ ಪೂರ್ಣಗೊಂಡಿದೆ. ಅದರಂತೆ ಜಲದುರ್ಗ ಐತಿಹಾಸಿಕ ಕೋಟೆಯ ಸಂರಕ್ಷಣೆ ಜೀರ್ಣೋದ್ಧಾರಕ್ಕೆ ಪ್ರಸ್ತಾವನೆ ಸ್ವೀಕೃತಗೊಂಡಲ್ಲಿ ನಿಯಮಾನುಸಾರ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಇದನ್ನೂಓದಿ:ಅರಣ್ಯಭೂಮಿ ಗಡಿ ಗುರುತಿಸಲು ಕಂದಾಯ ಅರಣ್ಯ ಇಲಾಖೆ ಜಂಟಿ ಸರ್ವೆ: ಸಚಿವ ಈಶ್ವರ್ ಖಂಡ್ರೆ