ಚಿಕ್ಕೋಡಿ: ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಲೀನವಾಗಿರುವ, ಸಹಸ್ರಾರು ಹಾಡುಗಳ ಒಡೆಯ ಗಾನ ಗಂಧರ್ವ ಡಾ.ಎಸ್ ಪಿ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಅವರ ಸಾವಿನ ಸುದ್ದಿ ನಮಗೆ ಅತೀವ ದುಃಖ ತಂದಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ, ಸಚಿವ ಶ್ರೀಮಂತ ಪಾಟೀಲ ಹಾಗೂ ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಸಂತಾಪ ಸೂಚಿಸಿದ್ದಾರೆ.
ಖ್ಯಾತ ಗಾಯಕ ಎಸ್ಪಿಬಿ ಅವರನ್ನು ಕಳೆದುಕೊಂಡು ಸಂಗೀತ ಕ್ಷೇತ್ರ ಬಡವಾದಂತಾಗಿದೆ. ಬಹುಭಾಷಾ ಗಾಯಕರಾಗಿದ್ದ ಕಂಚಿನ ಕಂಠದ ಬಾಲಸುಬ್ರಮಣ್ಯಂ, ಕನ್ನಡ, ತೆಲುಗು, ಹಿಂದಿ ಹೀಗೆ ಅನೇಕ ಭಾರತೀಯ ಭಾಷೆಗಳಲ್ಲಿ 40,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ದಾಖಲೆ ಬರೆದ ಗಾಯಕ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಭಾರತೀಯು ಸಂಗೀತ ಲೋಕಕ್ಕೆ ಅವರು ನೀಡಿದ ಕೊಡುಗೆ ಅಪಾರ. ಎಸ್ಪಿಬಿ ಅವರು ಈಗ ನಮ್ಮೊಂದಿಗೆ ಇಲ್ಲದಿರಬಹುದು, ಆದರೆ ಅವರ ಮಾಧುರ್ಯ ಸಿರಿಕಂಠದ ಗೀತೆ, ಸಂಗೀತಗಳಿಂದ ನಮ್ಮ ಮನಸ್ಸಿನಲ್ಲಿ ಸದಾ ನೆಲೆಸಿರುತ್ತಾರೆ. ಅವರ ಪ್ರತಿಭೆಗೆ ಅವರೇ ಸಾಟಿ ಅವರ ಸ್ಥಾನವನ್ನು ಯಾರೂ ತುಂಬಲೂ ಸಾಧ್ಯವಿಲ್ಲ ಎಂದಿದ್ದಾರೆ.
ಮೃತರ ಆತ್ಮಕ್ಕೆ ದೇವರು ಶಾಂತಿ ನೀಡಲಿ, ಅವರ ಕುಟುಂಬಸ್ಥರಿಗೂ ದುಃಖ ಭರಿಸುವ ಶಕ್ತಿ ನೀಡಲಿ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಜವಳಿ ಮತ್ತು ಅಲ್ಪಸಂಖ್ಯಾತರ ಸಚಿವ ಶ್ರೀಮಂತ ಪಾಟೀಲ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ತಮ್ಮ ಫೇಸ್ಬುಕ್ ಪೇಜ್ಗಳ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.