ಬೆಳಗಾವಿ: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮೂರೂವರೆ ವರ್ಷ ಅಧಿಕಾರ ನಡೆಸಲಿ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಆಶಯ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಶಿಸ್ತುಬದ್ಧ ಪಕ್ಷ. ಯಡಿಯೂರಪ್ಪನವರು ತಮ್ಮ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಲಿ. 2023ರ ಮೇನಲ್ಲಿ ಮತ್ತೆ ಜನತೆ ಮುಂದೆ ಹೋಗೋಣ. ಅಧಿಕಾರಿಗಳಿಂದ ಭ್ರಷ್ಟಾಚಾರ ಹೆಚ್ಚಾಗಿದೆ ಅಂತಾ ಯಡಿಯೂರಪ್ಪನವರೇ ಹೇಳಿದ್ದಾರೆ. ವಿಧಾನಸಭೆ ಅಧಿವೇಶನ ನಡೀತಿದೆ. ಎಲ್ಲದರ ಬಗ್ಗೆಯೂ ಚರ್ಚೆ ನಡೆಯಲಿದೆ. ಸಿದ್ದರಾಮಯ್ಯ, ಹೆಚ್‌ಡಿಕೆಗೆ ಮಾತನಾಡೋ ಶಕ್ತಿ ಇದೆ. ಸರ್ಕಾರಿ ಖಜಾನೆ ಖಾಲಿಯಾದ ಬಗ್ಗೆ ಶ್ವೇತಪತ್ರ ಹೊರಡಿಸುವ ಅಗತ್ಯ ಇಲ್ಲ. ಬಜೆಟ್ ಮಂಡನೆಯಾಗುವವರೆಗೂ ಕಾದು ನೋಡೋಣ. ಬಿಜೆಪಿ, ಕಾಂಗ್ರೆಸ್ನಲ್ಲಿಯೂ ಅತೃಪ್ತರು ಇದ್ದಾರೆ ಎಂದು ಹೇಳಿದರು.
ಒಂದು ಕಾಲದಲ್ಲಿ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಗೆದ್ದಿದ್ವಿ. ಈಗ ಝೀರೋ ಪಾಯಿಂಟ್‌ನಲ್ಲಿದ್ದೇವೆ. ಸತ್ಯ ಹೇಳೋದಕ್ಕೆ ಏನೂ ಅಂಜಿಕೆ ಇಲ್ಲ. ನನಗೆ 87 ವರ್ಷ ವಯಸ್ಸಾಗಿದೆ. ಪಕ್ಷವನ್ನು ಕಟ್ಟಬೇಕು ಎಂಬ ಬದ್ಧತೆ ಇದೆ. ರಿಯಾಲಿಟಿ ನನಗೆ ಗೊತ್ತಿದೆ. ಈಗ ಇರೋ ಲೀಡರ್‌ಗಳನ್ನೇ ಒಂದುಗೂಡಿಸಿ ಪಕ್ಷ ಕಟ್ಟಬೇಕು. ಫಲಾಫಲ ಜನತೆಯ ತೀರ್ಮಾನಕ್ಕೆ ಬಿಟ್ಟಿದ್ದು. ಕ್ಷೇತ್ರದ ಮೇಲೆ ಯಾರು ಆಸಕ್ತಿ ವಹಿಸುತ್ತಾರೋ ಅವರೊಂದಿಗೆ ಇಲ್ಲೇ ಕುಳಿತು ಚರ್ಚೆ ಮಾಡ್ತೇನೆ. ನನ್ನ ಕೆಲಸ ಗುರುತಿಸುವ ಹಿರಿಯ ನಾಯಕರು ಇದ್ದಾರೆ. ಯಂಗಸ್ಟರ್ಸ್ ಸಹ ಇದ್ದಾರೆ ಎಂದು ಪಕ್ಷವನ್ನು ಬಲಗೊಳಿಸುವ ಕುರಿತು ಹೇಳಿದರು.
ಪರಿಷತ್ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡರ ಕ್ರಾಸ್ ವೋಟಿಂಗ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಿ.ಟಿ.ದೇವೇಗೌಡ ಹಿಂದೆಯೂ ಬಿಜೆಪಿಗೆ ಹೋಗಿದ್ರು. ಈಗ ಜಿಟಿಡಿ ಬಿಜೆಪಿಗೆ ಹೋಗ್ತಾರೋ ಕಾಂಗ್ರೆಸ್ಗೆ ಹೋಗ್ತಾರೋ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರ ಪತನದ ನಂತರ ಜಿಟಿಡಿ ಯಡಿಯೂರಪ್ಪ ಮನೆಗೆ ಹೋಗಿದ್ರು. ಕ್ಷೇತ್ರದ ಕೆಲಸ ಮಾಡಲು ಡಿಸಿಎಂ ನೆರವು ಬೇಕು ಎಂದು ಜಿಟಿಡಿ ಹೇಳಿದ್ದಾರೆ. ನಾನೇನು ವಿಪ್ ಕೊಟ್ಟಿಲ್ಲ. ಜಿಟಿಡಿ ಕಾಂಗ್ರೆಸ್ ಅಥವಾ ಬಿಜೆಪಿಗೆ ಹೋಗ್ತಾರೋ ಗೊತ್ತಿಲ್ಲ. ನಾವು ವಿಪ್ ಮೂಲಕ ಯಾರನ್ನೂ ಕಟ್ಟಿ ಹಾಕಿಲ್ಲ. ರಾಜಕೀಯ ಉದ್ದೇಶಕ್ಕೆ ಏನ್ ತೀರ್ಮಾನ ಕೈಗೊಳ್ಳುತ್ತಾರೆ ಅವರಿಗೆ ಬಿಟ್ಟಿದ್ದು ಎಂದರು.
ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನ ವಿಚಾರದ ಬಗ್ಗೆ ಬಾಂಬೆಗೆ ಹೋದವರೇ ಹೇಳಿದ್ದಾರೆ, ನಾನು ಹೆಚ್ಚು ಮಾತನಾಡಲ್ಲ. ಸ್ಪೀಕರ್ ಹಾಗೂ ಸಿದ್ದರಾಮಯ್ಯ ಹೇಳಿದ ಮೇಲೆ ನಾವು ಬಾಂಬೆಗೆ ಹೋಗಿದ್ದೇವೆ ಅಂತ ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಬೇಕು ಎಂದು ಬಾಂಬೆಗೆ ಹೋಗಿದ್ದ ಶಾಸಕರೇ ಹೇಳಿದ್ದಾರೆ. ಹೀಗಾಗಿ ಸಮ್ಮಿಶ್ರ ಸರ್ಕಾರ ಪತನವಾದ ಬಗ್ಗೆ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ ಎಂದರು.