ಬೆಳಗಾವಿ : ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಆಗದಿದ್ದರೆ ಪ್ರತ್ಯೇಕ ರಾಜ್ಯ ಹೋರಾಟ ಅನಿವಾರ್ಯವಾಗಲಿದೆ. ಈ ಬಗ್ಗೆ ಮುಂದಿನ 15 ದಿನಗಳಲ್ಲಿ ಈ ಭಾಗದ ಎಲ್ಲ ಸಂಘಟನೆಗಳ ಸಭೆ ಕರೆದು ಚರ್ಚಿಸಿ, ಪಕ್ಷತೀತವಾಗಿ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಅಶೋಕ್ ಪೂಜಾರಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣವಾದಾಗ ಉತ್ತರ ಕರ್ನಾಟಕ ಭಾಗದ ಜನರು ಹೆಚ್ಚಿನ ಆಶಾಭಾವನೆ ಇಟ್ಟಿದ್ದರು. ಆಡಳಿತಾತ್ಮಕ ಶಕ್ತಿ ಕೇಂದ್ರವಾಗಿ ಉತ್ತರ ಕರ್ನಾಟಕ ಅಭಿವೃದ್ಧಿ ಆಗುತ್ತದೆ ಎಂಬ ಆಶಾ ಭಾವನೆ ಇತ್ತು. ನೂರಾರು ಕೋಟಿ ಖರ್ಚು ಮಾಡಿ ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಿದ್ದಾರೆ. ಆದ್ರೆ, ಆಡಳಿತಾತ್ಮಕ ಶಕ್ತಿ ಕೇಂದ್ರವಾಗಿ ಹೊರ ಹೊಮ್ಮಲಿಲ್ಲ.
ಸರ್ಕಾರ ಏಕೆ ಇಷ್ಟು ಉದಾಸೀನತೆ ಮಾಡುತ್ತಿದೆ?. ನಮ್ಮ ಭಾಗದ ಜನಪ್ರತಿನಿಧಿಗಳಿಂದ ನಮಗೆ ಸೂಕ್ತ ಬೆಂಬಲ ಸಿಗಲಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಉತ್ತರ ಕರ್ನಾಟಕ ಹಿಂದುಳಿದಿದೆ. ಬೆಂಗಳೂರಿನ ವಿಧಾನಸೌಧ ರೀತಿ ಸುವರ್ಣಸೌಧ ಆಡಳಿತಾತ್ಮಕ ಶಕ್ತಿ ಕೇಂದ್ರವಾಗಬೇಕು. ರಾಜ್ಯ ಮಟ್ಟದ ಇಲಾಖೆಗಳು ಸುವರ್ಣಸೌಧದಲ್ಲಿ ಕಾರ್ಯ ನಿರ್ವಹಿಸಬೇಕು. ಈ ಎಲ್ಲ ಬೇಡಿಕೆಗಳು ಈಡೇರದಿದ್ದರೆ ಉತ್ತರ ಕರ್ನಾಟಕ ಸಂಘಟನೆಗಳೆಲ್ಲವೂ ಒಗ್ಗೂಡಿ ಹೋರಾಟ ಮಾಡುತ್ತೇವೆ.
ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಲು ಸರ್ಕಾರ ಉದಾಸೀನತೆ ತೋರಿದ್ರೆ, ಮುಂಬರುವ ದಿನಗಳಲ್ಲಿ ಅನಿವಾರ್ಯವಾಗಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡಲಾಗುವುದು. ಈ ನಿಟ್ಟಿನಲ್ಲಿ 15 ದಿನಗಳಲ್ಲಿ ಉತ್ತರ ಕರ್ನಾಟಕ ಸಂಘಟನೆಗಳ ಸಭೆ ಕರೆಯುತ್ತೇವೆ. ಸಭೆ ಕರೆದು ಮುಂದಿನ ಹೋರಾಟ ರೂಪರೇಷೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಅಶೋಕ್ ಪೂಜಾರಿ ಹೇಳಿದರು.
ಗೋಕಾಕ್‌ನಲ್ಲಿ ಭೀತಿಯ ವಾತಾವರಣದಲ್ಲಿಟ್ಟು ಚುನಾವಣೆ : ದಬ್ಬಾಳಿಕೆ, ಜನರನ್ನು ಭಯಭೀತಿ ವಾತಾವರಣದಲ್ಲಿಟ್ಟು ಚುನಾವಣೆ ಗೆಲ್ಲುವ ಪ್ರಕ್ರಿಯೆ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿದೆ ಎಂದು ಎಂದು ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ ಆರೋಪಿಸಿದರು. ಅಂಕಲಗಿಯಲ್ಲಿ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜನರನ್ನು ಭಯಭೀತಿ ವಾತಾವರಣದಲ್ಲಿಟ್ಟು ಚುನಾವಣೆ ಗೆಲ್ಲುವ ಪ್ರಕ್ರಿಯೆ ಗೋಕಾಕ್‌ನಲ್ಲಿ ಸುಮಾರು 25 ವರ್ಷಗಳಿಂದಲೂ ನಡೆದುಕೊಂಡು ಬಂದಿದೆ ಎಂದು ದೂರಿದರು.
ಮಾರಾಮಾರಿ ಮಾಡಿದ ಎರಡೂ ಕುಟುಂಬದವರೂ ನಮ್ಮ ಸಂಬಂಧಿಕರು ಎಂಬ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಎರಡೂ ಕುಟುಂಬದವರು ಸಚಿವರ ಸಂಬಂಧಿಕರೋ ಅಥವಾ ಇಲ್ಲವೋ ಅವರಿಗೆ ಬಿಟ್ಟಿದೆ. ಆದ್ರೆ, ಇಬ್ಬರ ಮಧ್ಯೆ ಜಗಳವಾಗಿ ಕಾನೂನು ಪ್ರಕಾರ ಕೇಸ್ ದಾಖಲಾಗಿದೆ. ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಮೇಶ್ ಜಾರಕಿಹೊಳಿ ಉಸ್ತುವಾರಿ ಸಚಿವರಾದ ಮೇಲೆ ಗೋಕಾಕ್‌ನಲ್ಲಿ ಎರಡು ಘಟನೆಗಳಾದವು. ಗೋಕಾಕ್ನ ಡಾ.ಹೊಸಮನಿ ಆಸ್ಪತ್ರೆಯಲ್ಲಿ ಗಲಾಟೆ ಆಗಿ ಕೇಸ್ ದಾಖಲಾಗಿತ್ತು. ಈ ವೇಳೆ ಸಚಿವ ರಮೇಶ್ ಜಾರಕಿಹೊಳಿ ಬಹಿರಂಗವಾಗಿ ಯಾರ ವಿರುದ್ಧ ದೂರು ದಾಖಲಾಗಿದೆಯೋ ಅವರು ನಿರಪರಾಧಿಗಳು ಎಂದು ಹೇಳಿಕೆ ಕೊಟ್ರು. ಸಚಿವ ರಮೇಶ್ ಜಾರಕಿಹೊಳಿಯವರೇ ಆ ಸಂದರ್ಭದಲ್ಲಿ ಕ್ಲೀನ್‌ಚಿಟ್ ಕೊಟ್ಟಿದ್ರು.
ಜಿಲ್ಲಾ ಉಸ್ತುವಾರಿ ಸಚಿವರು ಆರೋಪಿಗಳ ಬಗ್ಗೆ ಕ್ಲೀನ್‌ಚಿಟ್ ನೀಡಿದ್ರೆ ಪೊಲೀಸರ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ ಹಾಗೇ ಆಗುತ್ತೆ. ಪ್ರಾಮಾಣಿಕ ತನಿಖೆಗೆ ಆಸ್ಪದ ಇರುವುದಿಲ್ಲ. ಇಂದು ಅಂತಹದ್ದೇ ಘಟನೆ ಅಂಕಲಗಿಯಲ್ಲಿ ಆಗಿದೆ. ಪೊಲೀಸರ ತನಿಖೆಯಲ್ಲಿ ಹಸ್ತಕ್ಷೇಪ ಮಾಡೋದು ನಿಮ್ಮ ಘನತೆಗೆ ತಕ್ಕದ್ದಲ್ಲ ಎಂದು ಅಶೋಕ್ ಪೂಜಾರಿ ಹೇಳಿದರು.