ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಯುಗ ಆರಂಭವಾಗಿದೆ. ರಾಜ್ಯದ ಮೂರು ಮಹಾನಗರ ಪಾಲಿಕೆಗಳ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಉಭಯ ಪಕ್ಷಗಳು ಕೈ ಜೋಡಿಸಿ ಅಧಿಕಾರ ಹಿಡಿಯಲು ಮುಂದಾಗಿವೆ.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಜತೆಗಿನ ಸಖ್ಯವನ್ನು ಕಡಿದುಕೊಂಡು ಬಿಜೆಪಿ ಅಧಿಕಾರಕ್ಕೇರಲು ಸಹಕರಿಸಿದ ನಂತರ ಜೆಡಿಎಸ್ ಇದೀಗ 'ಕೈ' ಪಾಳೆಯವನ್ನು ಅಧಿಕಾರದಿಂದ ದೂರವಿಡಲು ಬಿಜೆಪಿ ಜೊತೆ ಕೈ ಜೋಡಿಸಲು ಸಜ್ಜಾಗಿದೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಉಭಯ ಪಕ್ಷಗಳ ನಡುವೆ ಮೈತ್ರಿ ಯುಗ ಆರಂಭವಾಗಿರುವುದರ ಬಗ್ಗೆ ಸುಳಿವು ನೀಡಿದ್ದಾರೆ.
ಬಿಜೆಪಿಯ ಜತೆ ಕೈಗೂಡಿಸಿ ಅಧಿಕಾರ ಹಿಡಿಯುವ ಸಂಬಂಧ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೂಡಾ ಸುದ್ದಿಗಾರರ ಜೊತೆ ಮಾತನಾಡಿ, ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ಪಕ್ಷದ ಸ್ಥಳೀಯ ನಾಯಕರು, ಕಾರ್ಯಕರ್ತರ ಜತೆ ಮಾತುಕತೆ ನಡೆಸಿ ಎಂದು ಕುಮಾರಸ್ವಾಮಿ ಅವರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಮೈತ್ರಿ ಮಾಡಿಕೊಳ್ಳುವ ಸಂಬಂಧ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ನನ್ನ ಬಳಿಯೂ ಮಾತನಾಡಿದ್ದಾರೆ, ಕುಮಾರಸ್ವಾಮಿ ಅವರ ಬಳಿಯೂ ಮಾತನಾಡಿದ್ದಾರೆ. ಆದರೆ ಈ ಸಂಬಂಧ ನಾವೇ ತೀರ್ಮಾನ ಕೈಗೊಳ್ಳುವುದು ಬೇಡ, ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆ ಇಡುವುದು ಒಳ್ಳೆಯದು ಎಂದು ಹೇಳಿದರು.
ರಾಜ್ಯದ ಮೂರು ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಯಷ್ಟು ಸ್ಥಾನಗಳು ಬರದೇ ಇರಬಹುದು. ಆದರೆ ಎಲ್ಲ ಕಡೆ ನಾವು ಪೈಪೋಟಿ ಕೊಟ್ಟಿದ್ದೇವೆ ಎಂದರು.
ಅದೇ ರೀತಿ ಸೋಲು-ಗೆಲುವು ಅಂತ ನೋಡಿಕೊಂಡು ಸುಮ್ಮನೇ ಕೂರಲು ಆಗುವುದಿಲ್ಲ ಎಂದ ದೇವೇಗೌಡರು, ಇನ್ನು ನಾನು ಸುಮ್ಮನೇ ಕೂರುವುದಿಲ್ಲ. ಬೀದಿಗಿಳಿದು ಪಕ್ಷ ಕಟ್ಟುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ:ಕೈ ಭದ್ರಕೊಟೆ ಕಲಬುರಗಿಯಲ್ಲಿ ಕಮಲದ ಕಮಾಲ್: ಕಿಂಗ್ ಮೇಕರ್ ಆಗಲಿದೆ ಜೆಡಿಎಸ್!