ಬೆಳಗಾವಿ : ಲಿಂಗಾಯತ ಸಮುದಾಯದ ರಾಜಕೀಯ ಇತಿಹಾಸ ನೋಡಿದ್ರೆ ಸಮುದಾಯದ ಪರ ಧ್ವನಿ ಎತ್ತುವವರನ್ನು ಹತ್ತಿಕ್ಕುವ ಯತ್ನ ನಡೆದಿದೆ ಎಂದು ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಸಮುದಾಯದ ಪರವಾಗಿ ಧ್ವನಿ ಎತ್ತುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಹತ್ತಿಕ್ಕುವ ಯತ್ನ ನಡೆಯುತ್ತಿದೆ. ಆದರೆ, ಹುಲಿ ಯಾವತ್ತಿದ್ದರೂ ಹುಲಿಯೇ, ಏನೇ ಮಾಡಿದರೂ ಮತ್ತೆ ಪುಟಿದೇಳುವ ಶಕ್ತಿ ಈ ಸಮಾಜದವರಿಗೆ ಇದೆ ಎಂದರು.
ಸದನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಲಿಂಗಾಯತ ಸಮುದಾಯದ ಪರ ಧ್ವನಿ ಎತ್ತಿದ ಮೇಲೆ ಫೈರ್ ಬ್ರ್ಯಾಂಡ್ ಆಗಿದ್ದಾರೆ. ಈ ಮೊದಲು ಹಿಂದುತ್ವದ ಫೈರ್ ಬ್ರ್ಯಾಂಡ್ ಆಗಿದ್ದ ಯತ್ನಾಳ್, ಇಂದು ಲಿಂಗಾಯತ ಫೈರ್ ಬ್ರ್ಯಾಂಡ್ ಆಗಿ ಜನಪ್ರಿಯ ಆಗಿದ್ದಾರೆ. ಯತ್ನಾಳ್ ಅವರನ್ನು ಬಹುತೇಕ ಬಿಜೆಪಿ ವರಿಷ್ಠರು ಕಡೆಗಣಿಸುವ ಪ್ರಯತ್ನ ಮಾಡಲ್ಲ. ಸ್ಥಳೀಯ ಸಣ್ಣಪುಟ್ಟ ಬಿಜೆಪಿ ನಾಯಕರು ಕಡೆಗಣಿಸುವ ಯತ್ನ ಮಾಡಬಹುದು. ಆದರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ಮೋದಿ ಅಮಿತ್ ಶಾ ಕಡೆಗಣಿಸಲ್ಲ ಎಂದು ಹೇಳಿದರು.
ಓದಿ : ಯಡಿಯೂರಪ್ಪ-ಈಶ್ವರಪ್ಪ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ: ಅರುಣ್ ಸಿಂಗ್
ಯಡಿಯೂರಪ್ಪ ಅವರ ಸಮುದಾಯ ಕೇವಲ ಎರಡು ಪರ್ಸೆಂಟ್, ಪಂಚಮಸಾಲಿ ಸಮುದಾಯ 80 ಪರ್ಸೆಂಟ್ ಇದೆ. ನಿಜವಾಗಿ ಹೆಚ್ಚು ಜನಸಂಖ್ಯೆ ಇರುವ ಸಮುದಾಯ ಪಂಚಮಸಾಲಿ ಎಂದು ಕೇಂದ್ರ ಸರ್ಕಾರಕ್ಕೆ ಮನದಟ್ಟಾಗಿದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪಂಚಲಕ್ಷ ಹೆಜ್ಜೆ ಪಾದಯಾತ್ರೆ ಯಶಸ್ವಿಯಾಗಿ 23 ದಿನಗಳ ಸತ್ಯಾಗ್ರಹ ಹಾಗೂ ಸದನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೋರಾಟದ ಪರಿಣಾಮ ಮೀಸಲಾತಿ ಭರವಸೆ ಕೊಟ್ಟಿದ್ದಾರೆ. ಅಧಿವೇಶನದಲ್ಲಿ ಸಿಎಂ ಬಿಎಸ್‌ವೈ 6 ತಿಂಗಳೊಳಗೆ ಮೀಸಲಾತಿ ನೀಡುವ ಭರವಸೆ ನೀಡಿದ್ದಾರೆ. ನಮ್ಮ ಧರಣಿ ಸತ್ಯಾಗ್ರಹ ಸೆಪ್ಟೆಂಬರ್ 15ಕ್ಕೆ ಮುಂದೂಡಿದ್ದೇವೆ. ಸೆಪ್ಟೆಂಬರ್ 15ರೊಳಗೆ ಮೀಸಲಾತಿ ಘೋಷಿಸದೇ ಇದ್ದರೆ, ಅಕ್ಟೋಬರ್ 15ರಿಂದ ಮತ್ತೆ ಹೋರಾಟ ಮಾಡುತ್ತೇವೆ ಎಂದು ಸಿಎಂಗೆ ಎಚ್ಚರಿಕೆ ನೀಡಿದರು.