ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸುವರ್ಣ ವಿಧಾನಸೌಧದ ಮುಂದೆ ಅ. 28 ರಂದು ಒಂದು ದಿನದ ಕಾಲ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಕೂಡಲಸಂಗಮ ಮಹಾಪೀಠ ಧರ್ಮಕ್ಷೇತ್ರದ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಬಹುಸಂಖ್ಯಾತ ಸಮುದಾಗಳಲ್ಲಿಯೇ ಲಿಂಗಾಯತ ಪಂಚಮಸಾಲಿ ಸಮಾಜವು ಅಗ್ರಗಣ್ಯವಾಗಿದೆ. ಕೃಷಿ ಕಾರ್ಮಿಕ ನಿರತ, ದಾಸೋಹ ರೂಪಿತ, ಧರ್ಮ ಸಹಿತ, ಬೇಧರಹಿತ ಹಾಗೂ ರಾಷ್ಟ್ರ ಭಕ್ತಿ ಸಂಕಲ್ಪವಾದ ಸಮಾಜವೇ ಪಂಚಮಸಾಲಿ ಸಮಾಜವಾಗಿದೆ. ಕರ್ನಾಟಕದಲ್ಲಿ 80 ಲಕ್ಷ ಜನಸಂಖ್ಯೆ ಹೊಂದಿದ್ದರೂ ಸಹ ಆರ್ಥಿಕ ಶೈಕ್ಷಣಿಕ ಹಾಗೂ ಸಾಮಾಜಿಕ ಬೆಳವಣಿಗೆಯಲ್ಲಿ ಅತ್ಯಂತ ಹಿಂದುಳಿದ ಸಮಾಜವಾಗಿದೆ ಎಂದು ತಿಳಿಸಿದರು.
ಕೃಷಿಯನ್ನು ಕುಲ ಕಾಯಕವನ್ನಾಗಿಸಿಕೊಂಡಿರುವ ಈ ಸಮಾಜ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಹವಾಮಾನದ ವೈಪರೀತ್ಯದಿಂದಾಗಿ ಮಳೆ ಬೆಳೆ ಹಾಗೂ ಸೂಕ್ತ ಬೆಲೆ ಇಲ್ಲದೇ ಸರ್ವದೃಷ್ಟಿಯಿಂದಲೂ ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಹೀಗಾಗಿ ಮಕ್ಕಳ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಉದ್ಯೋಗಕ್ಕಾಗಿ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರದ 2ಎ ಹಾಗೂ ಎಲ್ಲ ಬಡ ಲಿಂಗಾಯತ ಉಪಸಮಾಜಗಳನ್ನು ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು ಎಂದರು.
ಇದಲ್ಲದೆ ಸಂಗೊಳ್ಳಿ ರಾಯಣ್ಣ ಹಾಗೂ ರಾಣಿ ಚನ್ನಮ್ಮ ಪುತ್ಥಳಿಗಳನ್ನು ಸುವರ್ಣ ಸೌಧ ಆವರಣದಲ್ಲಿ ಸ್ಥಾಪಿಸಬೇಕು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಕಿತ್ತೂರಿನಲ್ಲಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು.