ಅಥಣಿ(ಬೆಳಗಾವಿ) : ಮರಾಠಿ ಭಾಷಿಕರು ಬಹುಸಂಖ್ಯಾತರಾಗಿರುವ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡ್ತೇವೆ. ಕರ್ನಾಟಕ ಆಕ್ರಮಿತ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡ್ತೇವೆ ಎಂದು ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಟ್ವೀಟ್ ಮಾಡಿದ್ದರು. ಇದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆ ಅಥಣಿ ಪಟ್ಟಣದಲ್ಲಿ ಉದ್ದವ್ ಠಾಕ್ರೆ ಭಾವಚಿತ್ರ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಜಯ ಕರ್ನಾಟಕ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಪ್ರಲ್ಹಾದ ವಾಘಮೋರೆ ಮಾತನಾಡಿ, ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕಿರುವ ಜವಾಬ್ದಾರಿ ಸ್ಥಾನದಲ್ಲಿ ಇರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರು ನಮ್ಮ ನಾಡು ನುಡಿ ವಿಷಯವಾಗಿ ಕ್ಯಾತೆ ತೆಗೆಯುವ ಮೂಲಕ ಕನ್ನಡಿಗರ ಭಾವನೆ ಕೆರಳಿಸುತ್ತಿದ್ದಾರೆ.
ಮಹಾಜನ ಆಯೋಗದ ವರದಿ ಅಂತಿಮವಾಗಿದ್ದರೂ ಕೂಡ ಬೆಳಗಾವಿ, ಖಾನಾಪೂರ, ನಿಪ್ಪಾಣಿ ಸೇರಿದಂತೆ ಮರಾಠಿಗರು ಹೆಚ್ಚಾಗಿರುವ ಬೆಳಗಾವಿ ಭಾಗ ಮಹಾರಾಷ್ಟ್ರ ಸೇರಬೇಕು ಎಂದು ಟ್ವೀಟ್ ಮಾಡಿದ್ದಾರೆ. ಕೂಡಲೇ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಉದ್ದವ ಠಾಕ್ರೆ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು. ಇಲ್ಲವಾದ್ರೆ ಮುಂಬರುವ ಅನಾಹುತಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಕಾಂಗ್ರೆಸ್ ‘ರಾಜಭವನ ಚಲೋ’ಗೆ ತಡೆ: ಸಿದ್ದರಾಮಯ್ಯ, ಡಿಕೆಶಿ ಪೊಲೀಸ್ ವಶಕ್ಕೆ
ಮಹಾರಾಷ್ಟ್ರ ಸಿಎಂ ಪದೇಪದೆ ಸಮಾಜದ ಸ್ವಾಸ್ಥ್ಯ ಕೆಡುವಂತಹ ಹೇಳಿಕೆ ನೀಡುತಿದ್ದಾರೆ. ಅವರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಮೂಲಕ ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.