ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಜಾರಕಿಹೊಳಿ ಕುಂಟುಂಬದ ಪಾತ್ರ ಭಾರಿ ಮಹತ್ವ ಪಡೆದಿದೆ. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದರೆ ಜಾರಕಿಹೊಳಿ ಬ್ರದರ್ಸ್ ಬೇಕೇ ಬೇಕು ಎಂಬ ಮಾತುಗಳು ಬೆಳಗಾವಿ ಜನರದ್ದು.
ಸರ್ಕಾರ ಯಾವುದೇ ಆಗಲಿ ಸಿಎಂ ಯಾರೇ ಆಗಲಿ ಜಾರಕಿಹೊಳಿ ಮನೆತನಕೆ ಮಂತ್ರಿಗಿರಿ ಫಿಕ್ಸ್ ಎಂಬ ಮಾತಿದೆ. ಜಾರಕಿಹೊಳಿ ಸಹೋದರರಿಂದ ಯಾವುದೇ ತೊಂದರೆ ಬರಬಾರದು ಎಂದರೆ ಅವರು ಬೇಡಿದ ಖಾತೆಯನ್ನು ಅವರಿಗೆ ಕೊಡಬೇಕು. ಅವರು ಕೇಳಿದ ಖಾತೆ ಸಿಕ್ಕರೆ ಸರ್ಕಾರಕ್ಕೆ ಯಾವುದೇ ಆತಂಕ ಇರುವುದಿಲ್ಲ ಎಂಬೆಲ್ಲಾ ಮಾತುಗಳು ಬೆಳಗಾವಿ ಜನರದ್ದು.
ಸದ್ಯ ಜಾರಕಿಹೊಳಿ ಕುಟುಂಬದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವವರೆಂದರೆ ಗೋಕಾಕ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ. ಇವರು ಇದೀಗ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಈಗ ಪಕ್ಷ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ. ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಬಿಜೆಪಿಯಲ್ಲಿದ್ದಾರೆ. ಹಾಗೂ ಮತ್ತೊಬ್ಬ ಸಹೋದರ ಲಖನ್ ಕೂಡ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.
ಸದ್ಯ ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಜಾರಕಿಹೊಳಿ ಮನೆತನದ ಎರಡನೇಯ ತಲೆಮಾರು ಕೂಡಾ ಪ್ರವೇಶವಾಗಿದೆ. ಬೆಳಗಾವಿ ಜಿಲ್ಲಾ ಕೆಎಂಎಫ್‌ನ ನಿರ್ದೇಶಕರಾಗಿ ರಮೇಶ ಜಾರಕಿಹೊಳಿ ಪುತ್ರ ಅಮರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗುವುದರ ಮುಖಾಂತರ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಕ್ಕರೆ ಕಾರ್ಖಾನೆಯನ್ನು ಹೊಂದಿರುವ ಜಾರಕಿಹೊಳಿ ಕುಟುಂಬದವರು ದೊಡ್ಡ ಉದ್ಯಮಿಗಳು. ಉದ್ಯಮದ ಜೊತೆಗೆ ರಾಜಕೀಯವನ್ನು ಮಾಡುತ್ತಾ, ಎರಡು ರಾಷ್ಟ್ರೀಯ ಪಕ್ಷಗಳ ಜೊತೆ ಜಾರಕಿಹೊಳಿ ಸಹೋದರರು ಗುರುತಿಸಿಕೊಂಡಿದ್ದಾರೆ. ಆದರೆ, ಗೋಕಾಕ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ಬಿಜೆಪಿ ಸೇರುವ ಚಟುವಟಿಕೆ ಆರಂಭಿಸಿದ್ದು ರಾಜ್ಯ ರಾಜಕೀಯದಲ್ಲಿ ತಲ್ಲಣ ಉಂಟುಮಾಡಿದ್ದಾರೆ.
ಬೆಳಗಾವಿ ರಾಜಕೀಯದಲ್ಲಿ ಜಾರಕಿಹೊಳಿ ಸಹೋದರರು ಸಕ್ರಿಯವಾಗಿ ಪಾಲ್ಗೊಂಡು ಈಗ ನಿರ್ಣಾಯಕರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಕುಂದಾನಗರಿಯ ಪಾಲಿಟಿಕ್ಸ್‌ನಲ್ಲಿ ಬದಲಾವಣೆಗಳೇನಾದರೂ ಆಗಬೇಕಾದರೆ ಅಲ್ಲಿ ಜಾರಕಿಹೊಳಿ ಸಹೋದರರು ಬೇಕೇ ಬೇಕು ಎನ್ನುವ ಮಾತುಗಳು ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.