ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆ ಪ್ರಕರಣವೂ ಜೈನ ಸಮಾಜವನ್ನು ಸಿಡಿದೇಳುವಂತೆ ಮಾಡಿದೆ. ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಇಂದು ಬೆಳಗಾವಿಯ ಸುವರ್ಣವಿಧಾನಸೌಧ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಜೈನ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿದರು.
ಹೌದು.. ಜೈನ ಮುನಿಗಳನ್ನು ಆರೋಪಿಗಳು ಬರ್ಬರವಾಗಿ ಹತ್ಯೆ ಮಾಡಿರುವುದು ಬೆಳಗಾವಿ ಜಿಲ್ಲೆ ಅಷ್ಟೇ ಅಲ್ಲದೇ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಜೈನ ಸಮುದಾಯದವರ ಆಕ್ರೋಶದ ಕಟ್ಟೆ ಒಡೆದು ಹೋಗಿದೆ. ಈ ಘಟನೆ ಖಂಡಿಸಿ ಜೈನ ಮುನಿಗಳಾದ ಶ್ರೀ ಬಾಲಾಚಾರ್ಯ ಸಿದ್ಧಸೇನ ಮಹಾರಾಜರ ನೇತೃತ್ವದಲ್ಲಿ ಸುವರ್ಣ ವಿಧಾನಸೌಧ ಮುಂದೆ ರಾಷ್ಟ್ರೀಯ ಹೆದ್ದಾರಿ ತಡೆದು ಜೈನ ಸಮಾಜದವರು ಪ್ರತಿಭಟನೆ ನಡೆಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.
ಇದೇ ವೇಳೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಜೈನ ಮುನಿಗಳಾದ ಮುನಿ ಶ್ರೀ ಬಾಲಾಚಾರ್ಯ ಸಿದ್ಧಸೇನ ಮಹಾರಾಜರು, ಜೈನ ಮುನಿಗಳ ಹತ್ಯೆ ಮಾಡಿದ ದಿನ ಜೈನ ಸಮಾಜಕ್ಕೆ ಒಂದು ಕರಾಳ ದಿನ. ನಮ್ಮ ಪ್ರತಿಭಟನೆ ಯಾವುದೇ ಧರ್ಮ, ಜಾತಿ, ಪಕ್ಷ, ಸರ್ಕಾರದ ವಿರುದ್ಧದ ಹೋರಾಟವಲ್ಲ. ನಮ್ಮ ಜೈನ ಮುನಿಗಳ ಹತ್ಯೆ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಜೈನ ಸಮಾಜದ ತ್ಯಾಗ ಜೀವಿಗಳು ಮುನಿವರ್ಯರಿಗೆ ಸುರಕ್ಷತೆ ಅಗತ್ಯವಿದೆ. ಇದು ಮುಖ್ಯಮಂತ್ರಿ ಅಷ್ಟೇ ಅಲ್ಲದೇ ಪ್ರಧಾನಮಂತ್ರಿವರೆಗೂ ಮುಟ್ಟಬೇಕು. ಜೈನ ಧರ್ಮ ಅಹಿಂಸೋ ಪರಮೋ ಧರ್ಮ. ಬದುಕು ಮತ್ತು ಬದುಕಲು ಬಿಡು ಎನ್ನುವ ತತ್ವದ ಮೇಲೆ ನಡೆಯುವಂತಹದ್ದು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸರ್ಕಾರ ಇನ್ಮುಂದೆ ಇಂತಹ ಘಟನೆಗಳು ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ಟ್ರಸ್ಟ್ನಿಂದ ಹಣ ಕೊಡಿಸಿದ್ದ ಶ್ರೀಗಳು, ಮಾಧ್ಯಮಗಳಲ್ಲಿ ತಪ್ಪು ವರದಿ: ಸಮಾಜದ ಮುಖಂಡರಾದ ಬಾಹುಬಲಿ ಚೌಗುಲೆ, ಗೋಪಾಲ ಕುಡಚಿ, ಯಲ್ಲಪ್ಪ ಮೇಲಿನಮನಿ, ಶಾಂತಿನಾಥ ಬುಡವಿ ಮಾತನಾಡಿ, ಮೈ ಮೇಲಿನ ಬಟ್ಟೆಯನ್ನು ತ್ಯಾಗ ಮಾಡಿದ ಜೈನ ಮುನಿಗಳನ್ನು ಈ ರೀತಿ ಕ್ರೂರವಾಗಿ ಹತ್ಯೆ ಮಾಡುವ ಅವಶ್ಯಕತೆ ಏನಿತ್ತು. ಆ ಆರೋಪಿಗೆ ಕೊಟ್ಟಿದ್ದ ದುಡ್ಡು ಮುನಿಗಳದ್ದಲ್ಲ. ಟ್ರಸ್ಟ್ನಿಂದ ಹಣ ನೀಡಲಾಗಿತ್ತು.
ಮುನಿಗಳು ಹಣ ತೆಗೆದುಕೊಂಡು ಏನು ಮಾಡಬೇಕು. ಮಾಧ್ಯಮಗಳಲ್ಲಿ ಸಾಲ ಕೊಟ್ಟಿದ್ದು ಎಂದು ಕೇಳಿದ್ದಕ್ಕೆ ಮುನಿಗಳ ಹತ್ಯೆ ಆಗಿದೆ ಎಂದು ಬಿಂಬಿಸಲಾಗುತ್ತಿದೆ. ಯಾವತ್ತೂ ಜೈನ ಮುನಿಗಳು ಕೈಯಲ್ಲಿ ದುಡ್ಡು ಮುಟ್ಟುವುದಿಲ್ಲ. ಆದ್ದರಿಂದ ಮುನಿಗಳ ಹತ್ಯೆ ಮಾಡಿದ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಾಸಕ ಅಭಯ್ ಪಾಟೀಲ್, ಮಾಜಿ ಶಾಸಕ ಸಂಜಯ್ ಪಾಟೀಲ್, ಅಭಯ್ ಅವಲಕ್ಕಿ, ರವಿರಾಜ ಪಾಟೀಲ್, ಮನೋಜ್ ಸಂಕೇತಿ, ರಾಜೇಂದ್ರ ಜೈನ ಸೇರಿ ಹಲಗಾ, ಬಸ್ತವಾಡ, ಅಲಾರವಾಡ, ಅನಗೋಳ, ಪೀರನವಾಡಿ, ಮಚ್ಛೆ, ಮಜಗಾವಿ ಸೇರಿ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು.
ಇದನ್ನೂಓದಿ:ಜೈನ ಮುನಿಗಳ ಕೊಲೆ ಪ್ರಕರಣ ಸಿಬಿಐಗೆ ಒಪ್ಪಿಸಿ: ಬಿಜೆಪಿ ಶಾಸಕ ಅಭಯ ಪಾಟೀಲ್ ಆಗ್ರಹ