ಬೆಳಗಾವಿ : ಯಾವುದೇ ಚಟವಿಲ್ಲದ ನನಗೆ ಏನೂ ಆಗಲ್ಲ ಎಂಬ ಅತಿಯಾದ ಆತ್ಮವಿಶ್ವಾಸ ಸುರೇಶ್ ಅಂಗಡಿ ಅವರಲ್ಲಿತ್ತು. ಈ ಕಾರಣಕ್ಕೆ ಅವರು ಮಾಸ್ಕ್ ಧರಿಸುವುದನ್ನು ನಿರ್ಲಕ್ಷಿಸಿದರು. ಮುನ್ನೆಚ್ಚರಿಕೆ ವಹಿಸಿದ್ದರೆ ಅವರು ಬದುಕುತ್ತಿದ್ದರೇನೋ ಎಂದು ಸಚಿವ ಜಗದೀಶ ಶೆಟ್ಟರ್ ಭಾವುಕರಾದರು.
![Jagdish Shatter spoke about Suresh Angadi](https://etvbharatimages.akamaized.net/etvbharat/prod-images/kn-bgm-07-27-angadi-rss-shruddanjali-7201786_27092020212727_2709f_1601222247_152.jpg)
ಸಂಘ ಪರಿವಾರದಿಂದ ಭಾನುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ವಿಷಯದಲ್ಲಿ ನಿರ್ಲಕ್ಷ್ಯವಹಿಸಬಾರದು. ಮಾಸ್ಕ್ ಧರಿಸಿ ಎಂದು ಹಲವು ಬಾರಿ ಹೇಳಿದ್ದೆ. ಆಸ್ಪತ್ರೆಯಲ್ಲೂ ಅವರು ಆರಾಮಾಗಿದ್ದೇನೆ ಎಂದೇ ವೈದ್ಯರಿಗೆ ಹೇಳಿದ್ದರು ಎಂದು ತಿಳಿಸಿದರು. ಬೆಳಗಾವಿಯಲ್ಲಿ ಏನೂ ಇಲ್ಲದಿದ್ದ ಬಿಜೆಪಿ ಹೆಮ್ಮರವಾಗಿ ಬೆಳೆಯಲು ಅವರ ಕೊಡುಗೆಯೂ ಅಪಾರವಾಗಿದೆ ಎಂದು ನೆನೆದರು.
ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡುತ್ತಿದ್ದೆವು. ಏನೇ ಹೇಳಿದ್ರೂ ಸಿಟ್ಟು ಮಾಡಿಕೊಳ್ಳಲಿಲ್ಲ. ಸದಾ ಹಸನ್ಮುಖಿ ಆಗಿದ್ದರು ಎಂದು ಸ್ಮರಿಸಿದರು.
ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಜನಪ್ರತಿನಿಧಿ ಹೇಗಿರಬೇಕು ಎನ್ನುವುದನ್ನು ಎಲ್ಲರಿಗೂ ತೋರಿಸಿಕೊಟ್ಟು ಹೋಗಿದ್ದಾರೆ. ಸಮಾಜದಿಂದ ಲೇಸೆನಿಸಿಕೊಂಡು, ಆದರ್ಶದ ಬದುಕು ಬದುಕಿದವರು. ಕಾಯಕದಿಂದ ಜೀವನ ರೂಪಿಸಿಕೊಂಡವರು ಎಂದು ನೆನೆದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಸಾಮಾನ್ಯ ಕುಟುಂಬದಿಂದ ಸಾಧಿಸಬಹುದು ಎನ್ನುವುದಕ್ಕೆ ಅಂಗಡಿ ಉದಾಹರಣೆಯಾಗಿದ್ದಾರೆ. ಕೆಲಸಗಳ ಮೂಲಕ ಈ ಭಾಗಕ್ಕೆ ಗೌರವ ತಂದುಕೊಟ್ಟರು. ಯಾವಾಗಲೂ ರಾಜಕಾರಣಕ್ಕೇ ಸಮಯ ಕೊಡಬೇಡಿ ಉದ್ಯೋಗವನ್ನೂ ಮಾಡಿ ಎಂದು ಸಲಹೆ ನೀಡುತ್ತಿದ್ದರು ಎಂದು ಸ್ಮರಿಸಿದರು.