ಚಿಕ್ಕೋಡಿ : ಗುರುವಿಲ್ಲದೆಯೂ ಗುರಿ ತಲುಪಲು ಪರಿಶ್ರಮ ಮುಖ್ಯ ಎಂಬುವುದನ್ನು ಕಾಗವಾಡ ತಾಲೂಕಿನ ಚಾಲಕರೊಬ್ಬರ ಮಗ ಐಎಎಸ್ ಪರೀಕ್ಷೆಯಲ್ಲಿ ಸಾಧನೆ ಮಾಡುವುದರ ಮೂಲಕ ತೋರಿಸಿಕೊಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಜಗದೀಶ ಅಡಹಳ್ಳಿ ಅವರು ಐಎಎಸ್ ಪರೀಕ್ಷೆಯಲ್ಲಿ 440ನೇ ರ‍್ಯಾಂಕ್ ಪಡೆದು ರಾಜ್ಯ ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಮಧ್ಯಮ ವರ್ಗದ ಶ್ರೀಕಾಂತ್ ಹಾಗೂ ಸುಮಿತ್ರಾ ಅಡಹಳ್ಳಿ ದಂಪತಿಯ ನಾಲ್ವರು ಮಕ್ಕಳಲ್ಲಿ ಜಗದೀಶ ಕಿರಿಯ ಪುತ್ರ. 29 ವರ್ಷದಲ್ಲಿ ದೊಡ್ಡ ಹುದ್ದೆ ಪಡೆಯುವ ಮೂಲಕ ಇತರ ಬಡ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
ಕಳೆದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪರೀಕ್ಷೆಯಲ್ಲಿ ಉಪವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಮತ್ತೆ ಐಎಎಸ್‌ನಲ್ಲಿ ಉತ್ತೀರ್ಣರಾಗಿ ತಂದೆ-ತಾಯಿ ಜೊತೆಗೆ ಮೋಳೆ ಎಂಬ ಪುಟ್ಟ ಗ್ರಾಮಕ್ಕೆ ಹೆಮ್ಮ ತಂದಿದ್ದಾರೆ.
ಮೋಳೆಯ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಓದಿರುವ ಜಗದೀಶ, ಶೇ.80.06 ಅಂಕಗಳಿಸಿದ್ದರು. ಪಿಯುಸಿ ಅಥಣಿ ತಾಲೂಕಿನ ಜಾಧವಜಿ ಆನಂದಜಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.89 ಅಂಕ ಪಡೆದಿದ್ದರು. ಬೆಳಗಾವಿಯ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಕಾಲೇಜಿನಲ್ಲಿ ಪದವಿ ಮುಗಿಸಿ ಶೇ.87 ಅಂಕಗಳೊಂದಿಗೆ ತೇರ್ಗಡೆಯಾಗಿದ್ದರು. ಬಳಿಕ 2016 ರಿಂದ ನವದೆಹಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ಪಡೆಯುತ್ತಿದ್ದರು.
2016ರಲ್ಲಿ ನವದೆಹಲಿಯಲ್ಲಿ ಐಎಎಸ್ ಕೋಚಿಂಗ್ಗೆ ಸೇರ್ಪಡೆಗೊಂಡು ಅಧ್ಯಯನ ಪ್ರಾರಂಭಿಸಿದ ಜಗದೀಶ್, 5 ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದಾರೆ. ಕೆಎಎಸ್ 2ನೇ ಬಾರಿಯ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಈಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ 440 ರ‍್ಯಾಂಕ್ ಪಡೆದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿಗೆ ಹೆಮ್ಮೆ ಮೂಡಿಸಿದ್ದಾರೆ.