ಬೆಳಗಾವಿ : ಶಿಕ್ಷಣ ಪೂರ್ಣಗೊಳಿಸಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ/ಯುವತಿಯರಿಗೆ ಅವರ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ, ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವತಿಯಿಂದ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಶಿವಬಸವ ನಗರದಲ್ಲಿರುವ ಎಸ್.ಜಿ.ಬಾಳೆಕುಂದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಫೆ.28, 29 ರಂದು ಬೆಳಗಾವಿ-ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳ ಪ್ರಾದೇಶಿಕ ಉದ್ಯೋಗ ಮೇಳ ಅಂಗವಾಗಿ ಅಭಿವೃದ್ಧಿಪಡಿಸಲಾಗಿರುವ ವಿಶೇಷ ಅಂತರ್ಜಾಲ ತಾಣ (https://belagaviudyogamela.in/) ವನ್ನು ನಗರದ ಪ್ರವಾಸಿ ಮಂದಿರದಲ್ಲಿ ಅನಾವರಣಗೊಳಿಸಿದರು. ಫೆ.28 ಹಾಗೂ 29 ರಂದು ಬೆಳಗಾವಿಯಲ್ಲಿ ಉದ್ಯೋಗ ಮೇಳೆ ನಡೆಯಲಿದ್ದು, 150 ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಸುಮಾರು 15 ರಿಂದ 16 ಸಾವಿರ ಜನ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ಹೊರತುಪಡಿಸಿ ಪ್ರಥಮ ಬಾರಿಗೆ ದೊಡ್ಡಮಟ್ಟದ ಉದ್ಯೋಗ ಮೇಳ ಬೆಳಗಾವಿಯಲ್ಲಿ ಮಾಡುತ್ತಿದ್ದೇವೆ. ಈ ಉದ್ಯೋಗ ಮೇಳಕ್ಕೆ ಎಲ್ಲರ ಸಹಕಾರ ಮುಖ್ಯ. ಉದ್ಯೋಗ ಮೇಳ ಮಾಡುವುದರಿಂದ ಯುವಕರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಉದ್ಯೋಗ ಮೇಳ ಹಾಗೂ ಹೂಡಿಕೆದಾರರ ಸಮಾವೇಶಗಳ ಮೂಲಕ ಉತ್ತರ ಕರ್ನಾಟಕದಲ್ಲಿ ಒಂದು ಪ್ರಯೋಗ ಮಾಡುತ್ತಿದ್ದೇವೆ. ಈ ಪ್ರಯತ್ನ ಮುಂದುವರೆಯಲಿದ್ದು, ಬೆಳಗಾವಿಯಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಆಗಲಿದೆ. ಮುಂದಿನ ದಿನಗಳಲ್ಲಿ ಕಿತ್ತೂರು-ಹುಬ್ಬಳ್ಳಿ ರೈಲ್ವೆ ಮಾರ್ಗ ಆದರೆ ಬೆಳಗಾವಿ, ಹುಬ್ಬಳ್ಳಿ ಹಾಗೂ ಧಾರವಾಡ ನಗರಗಳನ್ನು ತ್ರಿವಳಿ ನಗರ ಮಾಡುವುದು ನಮ್ಮ ಕನಸಾಗಿದೆ ಎಂದು ಸಚಿವ ಶೆಟ್ಟರ್ ಮಾಹಿತಿ ನೀಡಿದರು.