ಬೆಳಗಾವಿ: ಘಟಪ್ರಭಾ ದಡದಲ್ಲಿ 108 ಅಡಿ ಎತ್ತರದ ಭವ್ಯವಾದ ಬಸವಣ್ಣನ ಪ್ರತಿಮೆ ಸ್ಥಾಪಿಸುವ ಬಗ್ಗೆ ಸೂಕ್ತ ಆದೇಶ ನೀಡಲಾಗುವುದು. ಈ ಪ್ರದೇಶವನ್ನು ವಿಶ್ವಮಟ್ಟದ ಪ್ರವಾಸಿ ತಾಣವಾಗಿಸುವ ಧ್ಯೇಯ ಸರ್ಕಾರದ್ದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅವರು ಬಸವೇಶ್ವರ ವೃತ್ತದ ಸಮೀಪದ ತಿನುಸುಕಟ್ಟೆ ಬಳಿ ಶ್ರೀ ಬಸವೇಶ್ವರ ಪ್ರತಿಮೆ ಮರು ನಿರ್ಮಾಣದ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜಾ ಕಾರ್ಯವನ್ನು ನೆರವೇರಿಸಿ ಮಾತನಾಡಿದರು.
ಬೆಳಗಾವಿಯಲ್ಲಿ ಬಸವೇಶ್ವರರ ನೂತನ ಪ್ರತಿಮೆ ಪ್ರತಿಷ್ಠಾಪಿಸಿರುವುದು ಅತ್ಯಂತ ಸಂತೋಷದ ಸಂಗತಿ. ಈ ವಿಷಯವನ್ನು ನಮ್ಮ ಜಿಲ್ಲೆ ವಕೀಲರು ಹಾಗೂ ಪಾಟೀಲರು ಬಂದು ಹೇಳಿದಾಗ, ಬಸವಣ್ಣನ ಕೆಲಸ ಎಂದರೆ ಎಲ್ಲರ ಕೆಲಸ, ವಿಶ್ವಬಂಧು, ದೇವರ ಕೆಲಸ ಎಂದು ಬೇರೆ ಯೋಚನೆ ಮಾಡದೇ ಒಪ್ಪಿಕೊಂಡು ಇಂದಿನ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಬಸವಣ್ಣನ ಹಾಗೂ ಅವರ ವಿಚಾರಧಾರೆಗಳು ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಬಸವಣ್ಣನವರ ಕೆಲಸಗಳನ್ನು ಗಮನಿಸಿದಾಗ, 12ನೇ ಶತಮಾನದಲ್ಲಿ ಅಂತಹ ದೂರದೃಷ್ಟಿ ಶರಣರಿಗೆ ಇತ್ತು ಎನ್ನುವುದು ಆಶ್ಚರ್ಯವಾಗುತ್ತದೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಜೀವನದಲ್ಲಿ ಏನು ಮಾಡಬೇಕು ಎನ್ನುವುದಕ್ಕೆ ಜೀಸಸ್ ಕ್ರೈಸ್ಟ್ನಿಂದ ಬಂದಿರುವ 10 ಕಮಾಂಡ್ಮೆಂಟ್ಗಳು ಅಂತಿವೆ. ಹಾಗೆಯೇ ನಮ್ಮ ಬಸವಣ್ಣನವರು ವಚನಗಳ ಮೂಲಕ ನಮಗೆ ಸಪ್ತ ಹಾದಿಗಳನ್ನು ಕೊಟ್ಟಿದ್ದಾರೆ. 12 ನೇ ಶತಮಾನದಲ್ಲಿ ಬಸವಣ್ಣನವರು ಸನ್ಮಾರ್ಗವನ್ನು ತೋರಿದ್ದಾರೆ. ವಿಶ್ವದ ಮೊದಲ ಸಂಸತ್ತು ಎಂದೇ ಕರೆಸಿಕೊಳ್ಳುವ ಅನುಭವ ಮಂಟಪ ಸ್ಥಾಪಿಸಿದರು. ಪಾಶ್ಚಿಮಾತ್ಯ ದೇಶದಲ್ಲಿ ಮ್ಯಾಗ್ನಕಾರ್ಟ್ ಎಂದು ಕರೆಯುತ್ತಾರೆ. ಆ ಮ್ಯಾಗ್ನಕಾರ್ಟಗಿಂತ ಪೂರ್ವದಲ್ಲೇ ಜನರಿಂದ ಜನರಿಗಾಗಿಯೇ ನೈಜವಾಗಿರುವಂತಹ ಒಂದು ಪಾರ್ಲಿಮೆಂಟ್ ಅನುಭವ ಮಂಟಪವನ್ನು ಸ್ಥಾಪಿಸಿದವರು ಬಸವಣ್ಣ. ಅನುಭವ ಮಂಟಪದಲ್ಲಿ ಅಂದು ಚರ್ಚಿಸಲಾಗುತ್ತಿದ್ದ ಎಲ್ಲ ವಿಷಯಗಳು ಕೂಡ ಇಂದಿಗೂ ಪ್ರಸ್ತುತ.
ಅಸಮಾನತೆ, ಲಿಂಗಭೇದ, ಮೂಢನಂಬಿಕೆ, ಅನಿಷ್ಟ ಪದ್ಧತಿಗಳನ್ನು ವಿರೋಧಿಸಿದ್ದರು. ಬಸವಣ್ಣನ ತತ್ವಗಳು ಇಂದಿಗೂ ಪ್ರಸ್ತುತ ಎಂದರೆ, ಈ ಪಿಡುಗುಗಳು ಕೂಡ ಪ್ರಸ್ತುತವಾಗಿರುತ್ತವೆ. ಈ ವಿಷಯಗಳ ಬಗ್ಗೆ ಸಮಾಜದಲ್ಲಿ ಸ್ಪಷ್ಟತೆ ದೊರೆಯುವ ತನಕ ಬಸವಣ್ಣನವರೂ ಪ್ರಸ್ತುತರಾಗಿಯೇ ಇರುತ್ತಾರೆ. ಬಸವಣ್ಣನವರ ತತ್ವಾದರ್ಶಗಳನ್ನು ಪಾಲಿಸುವ ಕೆಲಸವಾಗಬೇಕು. ವಸ್ತುನಿಷ್ಟವಾಗಿ ಸಮಾಜದಲ್ಲಿರುವಂತಹ ಸಮಸ್ಯೆಗಳು ತಿಳಿದುಕೊಂಡು ಅವುಗಳನ್ನು ಸರಿಮಾಡುವಂತಹ ಕೆಲಸವಾಗಬೇಕು ಎಂದರು.
ಬಸವಣ್ಣನವರ ಮೂರ್ತಿ ಸ್ಥಾಪನೆ ಮಾಡುವುದು ಮಾತ್ರವಲ್ಲ ಅವರ ತತ್ವಗಳನ್ನು ಬದುಕಿನಲ್ಲಿ ಅಳವಡಿಸವುದರ ಸಲುವಾಗಿ ನಿರಂತರವಾಗಿ ಪ್ರಯತ್ನಗಳು ಆದಾಗ ಮಾತ್ರ ಮೂರ್ತಿ ಸ್ಥಾಪನೆಗೆ ನಿಜವಾದ ಅರ್ಥ ಬರುತ್ತದೆ. ಈ ದೇಶದಲ್ಲಿ ಬಹಳಷ್ಟು ಆಚಾರ್ಯರಿದ್ದಾರೆ, ಆಚರಣೆ ಇಲ್ಲ. ನಮ್ಮ ದೇಶಕ್ಕೆ ಚರಿತ್ರೆ ಇದೆ, ಚಾರಿತ್ರ್ಯ ಬೇಕಾಗಿದೆ. ಸಂಘರ್ಷವಿದೆ, ಸಮನ್ವಯ ಬೇಕಾಗಿದೆ. ಸಾಮಾಜಿಕ ಪರಿವರ್ತನೆಯಾಗುವಂತಹ, ವೈಚಾರಿಕವಾಗಿ ಮುನ್ನಡೆಯಲು ಬಸವ ತತ್ವಗಳು ಪ್ರೇರಣೆ ನೀಡಲಿದೆ ಎಂದರು. ಕೆ.ಎಲ್.ಇ ಸಂಸ್ಥೆಗಳ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಅಭಯ್ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಲಂಡನ್ನಲ್ಲಿ ಬಸವೇಶ್ವರರ ಪ್ರತಿಮೆಗೆ ರಾಹುಲ್ ಗಾಂಧಿ ಮಾಲಾರ್ಪಣೆ: ಪ್ರಜಾಪ್ರಭುತ್ವದ ಹರಿಕಾರರು ಎಂದು ಬಣ್ಣನೆ