ಚಿಕ್ಕೋಡಿ: ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರಕಾರಿ ಶಾಲೆಗೆ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ತೀರ ಕಡಿಮೆಯಾಗುತ್ತಿದೆ. ಇಂಥ ಪರಿಸ್ಥಿತಿಯನ್ನು ತಪ್ಪಿಸಲು ತಾಲೂಕಿನ ವಿದ್ಯಾನಗರದ ನಮ್ಮೂರ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿನೂತನ ಕಾರ್ಯಕ್ರಮ ರೂಪಿಸಿದ್ದಾರೆ.
ಶಾಲೆಗೆ ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಈಗಾಗಲೇ ಪ್ರವೇಶ ಪಡೆದ ಮಕ್ಕಳನ್ನು ಎತ್ತಿನ ಬಂಡಿ ಮೂಲಕ ಸುತ್ತಮುತ್ತಲಿನ ನಗರದಲ್ಲಿ ಮೆರವಣಿಗೆ ಮಾಡಿ, ಶಾಲೆಯಲ್ಲಿ ಮಕ್ಕಳಿಗೆ ಸಿಹಿ ಊಟ ಮಾಡಿಸುವುದರ ಜೊತೆಗೆ ಹಲವಾರು ವಿಶೇಷ ಕಾರ್ಯಕ್ರಮ ರೂಪಿಸಿ ಮಕ್ಕಳನ್ನು ಆಕರ್ಷಿಸುತ್ತಿದ್ದಾರೆ.
ಚಿಕ್ಕೋಡಿಯ ವಿದ್ಯಾನಗರದ ಸರಕಾರಿ ಶಾಲೆಯಲ್ಲಿ 2 ನೇ ತರಗತಿಯಿಂದ 5 ನೇ ತರಗತಿ ವರೆಗೆ ಒಟ್ಟು 40 ವಿದ್ಯಾರ್ಥಿಗಳಿದ್ದು, ಈ ವರ್ಷ 1 ನೇ ತರಗತಿಗೆ 6 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಒಟ್ಟು 10 ವಿದ್ಯಾರ್ಥಿಗಳು ಪ್ರವೇಶ ಪಡೆಯುವ ನಿರೀಕ್ಷೆ ಇದೆ ಎಂದು ಇಲ್ಲಿನ ಶಿಕ್ಷಕರು ತಿಳಿಸಿದ್ದಾರೆ.
ಈ ಸರಕಾರಿ ಶಾಲೆಯ 100 ಮೀ ಅಂತರದಲ್ಲಿರುವ ಖಾಸಗಿ ಶಾಲೆ ಮಕ್ಕಳಿಗೆ ಬಸ್ ವ್ಯವಸ್ಥೆ ಕಲ್ಪಿಸಿರುವುದರಿಂದ ನಗರದ ಬಹುತೇಕ ಪಾಲಕರು ಖಾಸಗಿ ಶಾಲೆಗಳ ಕಡೆ ಮುಖ ಮಾಡಿದ್ದಾರೆ. ಇದರಿಂದ ಸ್ವಲ್ಪ ಮಟ್ಟಿಗೆ ಸರಕಾರಿ ಶಾಲೆಯಲ್ಲಿ ಪ್ರವೇಶಾತಿ ಕಡಿಮೆಯಾಗುತ್ತಿದೆ. ಆದರೂ ಇಲ್ಲಿನ ಶಿಕ್ಷಕರು ಛಲ ಬಿಡದೆ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ವಿನೂತನ ಕಾರ್ಯಕ್ರಮ ನೀಡಿ ಪಾಲಕರು ಹಾಗೂ ಮಕ್ಕಳನ್ನು ಸೆಳೆಯುತ್ತಿದ್ದಾರೆ.