ಬೆಳಗಾವಿ: ರಿಮೋಟ್ ಕೀ ಹ್ಯಾಕ್ ಮಾಡಿ ಮನೆ ಮುಂದೆ ನಿಲ್ಲಿಸಿದ್ದ ಎರಡು ಹೊಚ್ಚ ಹೊಸ ಇನ್ನೋವಾ ಕ್ರಿಸ್ಟಾ ಕಾರನ್ನೇ ದುಷ್ಕರ್ಮಿಗಳು ಎಗರಿಸಿ ಪರಾರಿಯಾಗಿರುವ ಘಟನೆ ನಗರದ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಹೈಟೆಕ್ ಟೆಕ್ನಿಕ್ ಬಳಸಿ ಕರಾಮತ್ತು ಮಾಡಿದ್ದ ಈ ಕಳ್ಳರ ಗ್ಯಾಂಗ್, ಬೆಳಗಾವಿಯಲ್ಲೂ ಆ್ಯಕ್ಟಿವ್ ಆಗಿದೆ. ಕಾರು ಕಳ್ಳತನಕ್ಕೆ ಬಳಸಿದ್ದ ಸುಧಾರಿತ ತಂತ್ರಜ್ಞಾನಕ್ಕೆ ನಗರದ ಪೊಲೀಸರೇ ದಂಗಾಗಿದ್ದಾರೆ.
ಜಿಲ್ಲೆಯ ಅಶೋಕ ನಗರದ ನಿವಾಸಿ ಡಾ. ಮೃತ್ಯುಂಜಯ ಬೆಲ್ಲದ ಹಾಗೂ ರಾಮತೀರ್ಥ ನಗರದ ನಿವಾಸಿ ಹಾಗೂ ಉದ್ಯಮಿ ಅನಿಲ್ ಪಾಟೀಲ ಎಂಬುವವರಿಗೆ ಸೇರಿದ ಕಾರುಗಳನ್ನು ಕಳ್ಳತನ ಮಾಡಲಾಗಿದೆ. ಹೈಟೆಕ್ ರೀತಿಯಲ್ಲಿ ಕಾರು ಕಳ್ಳತನ ಮಾಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರು ಕಳ್ಳತನದ ದೃಶ್ಯ ನೋಡಿ ಮಾಲೀಕರಷ್ಟೇ ಅಲ್ಲದೇ ಪೊಲೀಸರು ಸಹ ದಂಗಾಗಿದ್ದಾರೆ.
ಈ ಗ್ಯಾಂಗ್ ಸದಸ್ಯರು ಕಾರು ಕಳ್ಳತನದ ಕೃತ್ಯ ಮುಗಿದ ತಕ್ಷಣವೇ ಸಿಮ್ ಕಾರ್ಡ್ ಚೇಂಜ್ ಮಾಡುತ್ತಾರೆ. ಹೀಗಾಗಿ ಹೈಟೆಕ್ ಕಳ್ಳರ ಸುಳಿವು ಬೆಳಗಾವಿ ಮಹಾನಗರ ಪೊಲೀಸರಿಗೆ ಲಭ್ಯವಾಗುತ್ತಿಲ್ಲ. ಹುಬ್ಬಳ್ಳಿಯಲ್ಲೂ ಹೈಟೆಕ್ ಟೆಕ್ನಿಕ್ ಬಳಸಿ ಈ ಗ್ಯಾಂಗ್ ಕೃತ್ಯ ಎಸಗಿರುವ ಬಗ್ಗೆ ತನಿಖೆಯಿಂದ ಬೆಳಕಿಗೆ ಬಂದಿದೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ ಎಂದು ಡಿಸಿಪಿ ಕ್ರೈಂ ಚಂದ್ರಶೇಖರ ನೀಲಗಾರ ಮಾಹಿತಿ ನೀಡಿದ್ದಾರೆ.