ಬೆಳಗಾವಿ: ಇಲ್ಲಿನ ಮರಾಠಾ ಲಘು ಪದಾತಿ ದಳ (ಎಂಎಲ್‌ಐಆರ್‌ಸಿ) ಕೇಂದ್ರದಲ್ಲಿ ಭಾರತ ಮತ್ತು ಜಪಾನ್ ನಡುವಿನ ಜಂಟಿ ಸಮರಾಭ್ಯಾಸ ಧರ್ಮ ಗಾರ್ಡಿಯನ್–2021 3ನೇ ಆವೃತ್ತಿ ಬುಧವಾರವೂ ಮುಂದುವರೆಯಿತು.
ಭಾರತೀಯ ಸೇನೆಯ 15ನೇ ಬೆಟಾಲಿಯನ್‌ನ ಮರಾಠಾ ಲೈಟ್ ಇನ್ಫಂಟ್ರಿ ರೆಜಿಮೆಂಟ್ ಹಾಗೂ ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ನ 30ನೇ ದಳದ ತಲಾ 40 ಯೋಧರು ಈ ಕಾರ್ಯಾಚಾರಣೆಯಲ್ಲಿ ಭಾಗಿಯಾಗಿದ್ದರು.
ಉಗ್ರರ ಅವಿತಿರುವ ಮನೆಯೊಳಗೆ ಗ್ರೆನೇಡ್ ಸ್ಫೋಟಿಸಿ ಒಳನುಗ್ಗಿದ ಯೋಧರು ಉಗ್ರರ ಹತ್ಯೆಗೈಯ್ಯುವ ಪ್ರದರ್ಶನ ನಡೆಸಿದರು. ಈ ವೇಳೆ ಯೋಧರ ಸಾಹಸ ಮೈನವಿರೇಳಿಸುವಂತಿತ್ತು. ಡ್ರೋನ್ ಕ್ಯಾಮರಾ ಬಳಸಿ ಉಗ್ರರ ಚಲನವಲನಗಳನ್ನು ಸೆರೆ ಹಿಡಿದು ದಾಳಿ ಮಾಡುವ ಸಾಹಸ ಜಂಟಿ ಸಮರಾಭ್ಯಾಸದಲ್ಲಿ ಕಂಡುಬಂತು.
ಇದಾದ ಬಳಿಕ, ಭಾರತೀಯ ಸೇನೆ ಬಳಸುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಪ್ರದರ್ಶನ ನಡೆಯಿತು.
ಉಭಯ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಮೇಜರ್ ಜನರಲ್ ಭವಿನೀಷ್ ಕುಮಾರ್, 'ಸೇನಾ ಕಾರ್ಯಾಚರಣೆಯಲ್ಲಿ ಯೋಜನೆ, ಅಭ್ಯಾಸ ಹಾಗೂ ಅನುಷ್ಠಾನ ಎಲ್ಲವೂ ಉತ್ತಮವಾಗಿತ್ತು. ಯುವ ಸೈನಿಕರಾದ ನೀವು ಅತ್ಯಾಧುನಿಕ ತಂತ್ರಜ್ಞಾನವನ್ನು ಅತ್ಯಂತ ವೃತ್ತಿಪರ ರೀತಿಯಲ್ಲಿ ಬಳಸಿದ್ದೀರಿ. ಪರಸ್ಪರ ಅರ್ಥ ಮಾಡಿಕೊಂಡು ಆತ್ಮವಿಶ್ವಾಸದಿಂದ ಕೆಲಸ ಮಾಡಿದ್ದೀರಿ. ಎಲ್ಲಿ ಬೇಕಾದರೂ ಜಂಟಿ ಕಾರ್ಯಾಚರಣೆ ನಡೆಸಲು ಸಿದ್ಧವಾಗಿದ್ದೀರಿ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಶ್ಲೇಷಣೆ: ಉಕ್ರೇನ್ಗೆ ನೆರವಾದ ಅಮೆರಿಕ ನಿರ್ಮಿತ ಟ್ಯಾಂಕ್ ವಿರೋಧಿ ಕ್ಷಿಪಣಿಗಳು