ಚಿಕ್ಕೋಡಿ (ಬೆಳಗಾವಿ): ಕೃಷ್ಣಾ ನದಿಯಲ್ಲಿ ಅಕ್ರಮವಾಗಿ ರಾತ್ರೋರಾತ್ರಿ ಮರಳು ಗಣಿಗಾರಿಕೆ ನಡೆಸುತ್ತಿರುವ ಅಡ್ಡೆಗಳ ಮೇಲೆ ಅಥಣಿ ಪೊಲೀಸರು ದಾಳಿ ನಡೆಸಿ 30ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮಳೆಯಿಲ್ಲದೇ ಬತ್ತಿ ಹೋಗಿರುವ ನದಿಯೊಡಲಿನ ಅಲ್ಲಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಸರ್ಕಾರ ಇದಕ್ಕಾಗಿ ನಿಯಮಗಳನ್ನು ಮಾಡಿದ್ದರೂ ಗುತ್ತಿಗೆ ಪಡೆಯದೇ ಅಧಿಕಾರಿಗಳಿಗೆ ತಿಳಿಯದಂತೆ ದಂದೆ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದ ಸಮೀಪದಲ್ಲಿ ಹರಿಯುವ ಕೃಷ್ಣಾ ನದಿಯಲ್ಲಿ ರಾತ್ರಿ ಅಕ್ರಮವಾಗಿ ಮರಳು ತೆಗೆದು ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸರು ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೇ ನೇತೃತ್ವದಲ್ಲಿ ಹಠಾತ್ ದಾಳಿ ನಡೆಸಿ 26 ಟ್ರ್ಯಾಕ್ಟರ್, 4 ಜೆಸಿಬಿ ಮತ್ತು ಒಂದು ಟಿಪ್ಪರ್ ವಾಹನ ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
30ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದಂತೆ ಸ್ಥಳಕ್ಕೆ ಬೆಳಗಾವಿ ಎಸ್ಪಿ ಡಾ. ಸಂಜೀವ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಎಸ್ಪಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, "ಅಕ್ರಮ ಮರಳು ಗಣಿಗಾರಿಕೆಗೆ ಬಳಸುವ ವಾಹನಗಳನ್ನು ವಶಪಡಿಸಿಕೊಂಡಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ಮರಳು ದಂಧೆಕೋರರು ಪ್ರವೇಶ ಮಾಡಿಲ್ಲ. ಬಾಗಲಕೋಟೆ ಜಿಲ್ಲೆಯ ಆಸಂಗಿ ಗ್ರಾಮದವರು ಗಣಿಗಾರಿಕೆ ನಡೆಸುತ್ತಿದ್ದರು. ನಮ್ಮ ಪೊಲೀಸರು ಖಚಿತ ಮಾಹಿತಿ ಪಡೆದುಕೊಂಡು ದಾಳಿ ನಡೆಸಿದ್ದಾರೆ. ತನಿಖೆ ಮುಂದುವರಿಸಿದ್ದೇವೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Illegal sand: ಸ್ಟಾಕ್ ಯಾರ್ಡ್ಗೆ ಶಾಸಕಿ ದಾಳಿ.. ಅಕ್ರಮ ಮರಳು ದಂಧೆ ಕಂಡು ಕರೆಮ್ಮ ನಾಯಕ್ ಗರಂ
ಇತ್ತೀಚೆಗೆ ಇದೇ ಕೃಷ್ಣಾ ನದಿಯೊಡಲಿನಲ್ಲಿ ಮರಳು ಗಣಿಗಾರಿಕೆ ಆಗುತ್ತಿದ್ದುದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಬಾಗೂರು, ಹೇರುಂಡಿ ಗ್ರಾಮದಲ್ಲಿ ವರದಿಯಾಗಿತ್ತು. ನದಿತೀರದಲ್ಲಿ ಎಗ್ಗಿಲ್ಲದೇ ಹಗಲು ರಾತ್ರಿ ಎನ್ನದೇ ದಂಧೆ ನಡೆಯುತ್ತಿದೆ ಎಂದು ಹಲವು ಬಾರಿ ಶಾಸಕಿ ಕರೆಮ್ಮ ತಾಲೂಕು ಆಡಳಿತ, ಜಿಲ್ಲಾಧಿಕಾರಿ ಹಾಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದರು.
ಅಲ್ಲದೇ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಮಂತ್ರಿ ಡಾ. ಶರಣಪ್ರಕಾಶ್ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಮಾತನಾಡಿ, ಮರಳು ಮಾಫಿಯಾ ನಿಯಂತ್ರಿಸುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದರು. ಆದರೂ ರಾಜಾರೋಷವಾಗಿ ಪರವಾನಗಿ ಇಲ್ಲದೇ ಮರಳುಗಾರಿಕೆ ನಡೆಯುತ್ತಿತ್ತು. ಕೊನೆಗೆ ಶಾಸಕಿಯೇ ತಮ್ಮ ಬೆಂಬಲಿಗರೊಂದಿಗೆ ತಡರಾತ್ರಿ ಮರಳು ಸ್ಟಾಕ್ ಯಾರ್ಡ್ ಮೇಲೆ ದಾಳಿ ನಡೆಸಿ ಅಕ್ರಮವನ್ನು ಬಯಲಿಗೆಳೆದಿದ್ದರು.
ಇದನ್ನೂ ಓದಿ: ಅಕ್ರಮ ಚಟುವಟಿಕೆಗಳಿಗೆ ಏಕಿಲ್ಲ ಕಡಿವಾಣ?: ಪೊಲೀಸ್ ಅಧಿಕಾರಿಗಳಿಗೆ ಪ್ರಿಯಾಂಕ್ ಖರ್ಗೆ ಕ್ಲಾಸ್