ಬೆಳಗಾವಿ: ದೇಶದಲ್ಲಿ ಬದಲಾವಣೆ ಎಂಬುದಾಗಿದ್ದರೆ, ಅದಕ್ಕೆ ಶಿಕ್ಷಕರ ಕೊಡುಗೆ ಅಪಾರ. ಶಿಕ್ಷಕರು ಒಳ್ಳೆಯ ಶಿಕ್ಷಣ ನೀಡಿದ ಕಾರಣ ಎಲ್ಲರೂ ಸಮಾಜದಲ್ಲಿ ಉನ್ನತ ಹುದ್ದೆ ಹೊಂದಲು ಸಾಧ್ಯವಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.
ನಗರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಸುರೇಶ್ ಅಂಗಡಿ, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಒಬ್ಬ ಆದರ್ಶ ಶಿಕ್ಷರಾಗಿದ್ದರು. ಅವರು ಬದುಕಿನುದ್ದಕ್ಕೂ ತಮ್ಮ ಜೀವನವನ್ನು ಪಾರದರ್ಶಕತೆಯಿಂದ ಬದುಕಿದ್ದರು. ಅಂತಹ ಮಹಾನ್ ಶಿಕ್ಷಕರ ಮೌಲ್ಯಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳನ್ನು ತಿದ್ದುವ ಕೆಲಸ ಇಂದಿನ ಶಿಕ್ಷಕರು ಮಾಡಬೇಕು ಎಂದರು.
ದೇಶದಲ್ಲಿ ಆಗಿರುವ ಬದಲಾವಣೆಗಳಲ್ಲಿ ಶಿಕ್ಷಕರ ಪಾತ್ರ ತುಂಬಾ ಮುಖ್ಯವಾಗಿದೆ. ಅನೇಕ ಮಕ್ಕಳಿಗೆ ಅವರ ತಂದೆ-ತಾಯಿಗಳು ನೀಡದಂತ ಜ್ಞಾನವನ್ನು ಶಿಕ್ಷಕರು ನೀಡುತ್ತಾರೆ. ಶಿಕ್ಷಕರು ಕೇವಲ ಸಮಯ ನೋಡುವವರು ಆಗಬಾರದು. ವಿದ್ಯಾರ್ಥಿಗಳ ಭವಿಷ್ಯ ನೋಡುವಂತ ಶಿಕ್ಷಕನಾಗಬೇಕು ಎಂದರು.