ಬೆಳಗಾವಿ: ಕೊರೊನಾ ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳ ಕೊರತೆ ಇದ್ದರೆ ರೈಲ್ವೆ ಐಸೋಲೇಷನ್ ಬೋಗಿಗಳನ್ನು ಚಿಕಿತ್ಸೆ ನೀಡಲು ಸಿದ್ಧ ಮಾಡಲಾಗಿದೆ. ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದರೆ ಅವುಗಳನ್ನು ಹಸ್ತಾಂತರ ಮಾಡಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಗೃಹ ಇಲಾಖೆ ಸೂಚನೆ ಮೇರೆಗೆ ರೈಲ್ವೆ ಬೋಗಿಗಳನ್ನು ಐಸೋಲೇಷನ್ ವಾರ್ಡ್ ಆಗಿ ಪರಿವರ್ತಿಸಲಾಗಿದೆ. ಅಗತ್ಯ ಎಲ್ಲಿದೆಯೋ ತಿಳಿದು ಕೇಂದ್ರದ ಗೃಹ ಇಲಾಖೆಯೇ ಅವುಗಳ ನಿಯೋಜನೆ ಮಾಡಲಿದೆ. ನಮ್ಮ ಇಲಾಖೆಯಿಂದ ರೈಲ್ವೆ ಐಸೋಲೇಷನ್ ಬೋಗಿಗಳನ್ನು ಪರಿವರ್ತಿಸಿ ಹಸ್ತಾಂತರ ಮಾಡಲಾಗಿದೆ ಎಂದರು.
ಮಹಾರಾಷ್ಟ್ರದ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಅವರು ಅಲ್ಲಿನ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಪರಿಹರಿಸುತ್ತಿದ್ದಾರೆ. ರಾಜ್ಯದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಈ ರೀತಿ ಮಾಡಲಿ. ಸರ್ಕಾರವನ್ನು ಟೀಕಿಸುವ ಬದಲು ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಿ. ರಾಜ್ಯದಲ್ಲಿ ವಿಧಾನಸಭೆ, ಕೇಂದ್ರದಲ್ಲಿ ಲೋಕಸಭೆಗಳಿವೆ. ಪ್ರತಿಪಕ್ಷಗಳು ಆರೋಪ ಮಾಡಲು ಅಧಿವೇಶನ ಬಳಸಿಕೊಳ್ಳಲಿ. ಆದರೆ ಕೊರೊನಾದಂತಹ ಸಮಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದರು.
ದೇಶದ ಪ್ರತಿಯೊಬ್ಬರು ನಾಗರಿಕ ಸ್ವಾವಲಂಬಿಯಾಗಿ ಬದುಕಬೇಕು. ಈ ಕಾರಣಕ್ಕೆ ದೇಶದ ಪ್ರಧಾನಿ ಆತ್ಮ ನಿರ್ಭರ ಯೋಜನೆ ಜಾರಿಗೊಳಿಸಿದ್ದಾರೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಆ್ಯಪ್ಗಳನ್ನು ತಯಾರಿಸುವತ್ತ ಗಮನ ಹರಿಸಬೇಕು. ವೃತ್ತಿ ಕೌಶಲ್ಯಕ್ಕೆ ಪೂರಕವಾಗಿ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ತರಲು ಕೇಂದ್ರ ಚಿಂತನೆ ನಡೆಸುತ್ತಿದೆ. ಹೊಸ ಉದ್ಯಮ ಆರಂಭಿಸಲು ಇದ್ದ ಅಡೆತಡೆಗಳನ್ನು ಕೇಂದ್ರ ಸರ್ಕಾರ ನಿವಾರಿಸಲಿದೆ. ಸ್ಥಳೀಯ ವಸ್ತುಗಳ ಪೂರೈಕೆ ಹೆಚ್ಚಾದಂತೆ ಅವುಗಳ ಬಳಕೆಯೂ ಸ್ಥಳೀಯವಾಗಿ ಹೆಚ್ಚಾಗಬೇಕು. ಸ್ಥಳೀಯ ವಸ್ತುಗಳಿಗೆ ಗ್ಲೋಬಲ್ ಬ್ರ್ಯಾಂಡ್ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದರು.