ಧಾರವಾಡ : ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಆರಿಸಿ ಬಂದರೆ ಬೆಳಗಾವಿ ಜಿಲ್ಲೆಯಲ್ಲಿ ಭಯೋತ್ಪಾನೆ ಪ್ರಾರಂಭ ಆಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿದ ಅವರು, ಪಕ್ಷ ನನಗೆ ಆಹ್ವಾನ ನೀಡದಿದ್ದರೂ ಕ್ಷೇತ್ರದಲ್ಲಿ ಬಂದು ಪ್ರಚಾರ ಮಾಡಿದ್ದೇನೆ. ಪ್ರಧಾನಿ ಮೋದಿ ಅವರ ಆಡಳಿತ ಬಿಜೆಪಿಯ ಕೈಹಿಡಿಯಲಿದೆ. ಸತೀಶ್ ಜಾರಕಿಹೊಳಿ ಆರಿಸಿ ಬಂದರೆ ಬೆಳಗಾವಿ ಜಿಲ್ಲೆಯಲ್ಲಿ ಭಯೋತ್ಪಾನೆ ಪ್ರಾರಂಭ ಆಗುತ್ತದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿ ಪಾಕ್ ಪರ ಘೋಷಣೆ ಕೂಗಿದ್ದರು. ಅದರಲ್ಲಿ ಸತೀಶ್ ಜಾರಕಿಹೊಳಿ ಅವರ ಕೈವಾಡವೂ ಇತ್ತು. ಇದರಿಂದ ತುಷ್ಟೀಕರಣ ಹೆಚ್ಚಾಗುತ್ತದೆ. ಸತೀಶ್ ಆರಿಸಿ ಬಂದರೆ ಕೋಮುಗಲಭೆ ಹೆಚ್ಚಾಗುತ್ತದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಶಾಸಕರು ಪಕ್ಷದ ಪರ ಚುನಾವಣೆ ಮಾಡಲೇಬೇಕು. ಬಿಜೆಪಿ ನಾಯಕರನ್ನು ಖರೀದಿಸಲು ಸತೀಶ್ ಅವರು ಪ್ರಯತ್ನ ಮಾಡುತ್ತಿದ್ದಾರೆ. ಐದಾರು ಕೋಟಿ ರೂಪಾಯಿ ಒಬ್ಬೊಬ್ಬ ಶಾಸಕನಿಗೆ ಕೊಡುವಷ್ಟು ಹಣ ಅವರ ಬಳಿ ಇದೆ. ಆದರೂ ಅದು ಸಾಧ್ಯ ಆಗುವುದಿಲ್ಲ. ಬಿಜೆಪಿಯ ಬೆಳಗಾವಿ ನಾಯಕರು ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಲೀಡ್ ತೋರಿಸಬೇಕು. ಲೀಡ್ ಕಡಿಮೆ ಆದಲ್ಲಿ ದುಷ್ಪರಿಣಾಮವನ್ನು ಮುಂದೆ ಅನುಭವಿಸುತ್ತಾರೆ ಎಂದರು.