ಚಿಕ್ಕೋಡಿ: ನಿಮ್ಮ ಬಳಿ ಬಟ್ಟೆಯ ಹಾವಿದ್ದರೆ ನನ್ನ ಬಳಿ ನಿಜವಾದ ಹಾವಿದೆ. ನಮ್ಮ ತಂಟೆಗೆ ಬಂದ್ರೆ ನಿಜವಾದ ಹಾವು ಬಿಡಬೇಕಾಗುತ್ತದೆ. ನಾನು ಯಾರ ಬಳಿಯೂ ಕೋರ್ ಕಮಿಟಿ ಅಧ್ಯಕ್ಷನನ್ನಾಗಿ ಮಾಡಿ, ಕೋರ್ ಕಮಿಟಿ ಸದಸ್ಯನನ್ನಾಗಿ ಮಾಡಿ ಎಂದು ಹೋಗಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ನನ್ನನ್ನು ಏನಾದರೂ ಮಾಡಿ ಅಂತಾ ನಾನು ಯಾರ ಕಾಲಿಗೂ ಬಿದ್ದಿಲ್ಲ. ನಾನು ಕಾಲಿಗೆ ಬಿದ್ದಿದ್ದು ಕೇವಲ ಅಟಲ್ ಬಿಹಾರಿ ವಾಜಪೇಯಿಯವರಿಗೆ ಮಾತ್ರ. ನಾವು ಗೂಟ ಇಟ್ಟರೆ ವಾಪಸ್ ಸುಧಾರಿಸಿಕೊಳ್ಳಲು ನಿಮ್ಮಿಂದ ಆಗಲ್ಲ. ಪ್ರಧಾನಿಯೇ ಹೇಳ್ತಾರೆ ನಾನು ಒಬ್ಬ ಪ್ರಧಾನ ಸೇವಕ ಅಂತ. ನಾನೂ ಸಹ ಸೇವಕನೇ ಎಂದು ಹೆಸರು ಹೇಳದೇ ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಅವರಿಗೆ ಟಾಂಗ್ ನೀಡಿದರು.
ಬಸನಗೌಡನಿಗೆ ಯಾವುದೇ ಸೀಟು ಬರಬಾರದು ಎಂದು ಹಣ ಹಂಚಲಾಗುತ್ತಿದೆ. ವಿಜಯಪುರದ ಮಹಾನಗರ ಪಾಲಿಕೆ ಚುನಾವಣೆಗೆ ಬೆಂಗಳೂರಿನಿಂದ ಹಣ ಬರುತ್ತಿದೆ. ಮುಧೋಳದ ಸಕ್ಕರೆ ಕಾರ್ಖಾನೆ ನಡೆಸುವವ ಒಬ್ಬ ರೊಕ್ಕ ಕಳುಹಿಸುತ್ತಿದ್ದಾನೆ ಎಂದರು.
ಇಂದು ಎಸ್ಪಿಯಿಂದ ಮುಖ್ಯಮಂತ್ರಿಗಳಿಗೆ ಮೆಸೇಜ್ ಹೋಗುತ್ತದೆ. ಎಷ್ಟು ಜನ ಸೇರಿದ್ದರು. ಯತ್ನಾಳ ಏನು ಮಾತಾಡಿದ್ರು, ಅವನನ್ನು ತೆಗೆಯಲಿಕ್ಕೆ ಏನು ಮಾಡಬೇಕು ಎಂಬೆಲ್ಲ ಮಾಹಿತಿಗಳು ಸಿಎಂಗೆ ಹೋಗುತ್ತವೆ. ಕೆಲ ಪತ್ರಕರ್ತರು, ಯೂಟ್ಯೂಬ್ ಚಾನಲ್ನವರೂ ಸಹ ನನ್ನ ಹಿಂದೆ ಬಿದ್ದಿದ್ದಾರೆ. ನಾನು ಮಂತ್ರಿ ಆಕಾಂಕ್ಷಿ ಅಂತ ಯಾರೂ ಬರೆಯಬೇಡಿ. ನನಗೆ ಮಂತ್ರಿ ಸ್ಥಾನ ಬೇಡ. ಯಾರ ಕಾಲಿಗೂ ಬೀಳದವರು ಮೊನ್ನೆ ನಮ್ಮ ಸ್ವಾಮೀಜಿ ಕಾಲಿಗೆ ಬಿದ್ದಿದ್ದಾರೆ. ಯಾರ ಕಾಲಿಗೂ ಬಿದ್ದಿಲ್ಲ ಸರ್ ಅವರು ಅಂತ ನಮಗೆ ಒಬ್ಬರು ಅಂದಿದ್ರು. ಆದ್ರೆ, ಈಗ ಎಲ್ಲರೂ ಕಾಲಿಗೆ ಬೀಳುತ್ತಿದ್ದಾರೆ ಎಂದರು.
ಇದಕ್ಕೂ ಮೊದಲು ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯ ಹುಟ್ಟಡಗಿಸಿದ ಚನ್ನಮ್ಮನ ವಂಶಸ್ಥರು ನಾವು. ನನ್ನ ಮತ ಕ್ಷೇತ್ರದಲ್ಲಿ 5 ಸಾವಿರ ಪಂಚಮಸಾಲಿ ಜನ ಇರಬಹುದು. ಪಂಚಮಸಾಲಿ ಮಗಳಿಗೆ ನಮ್ಮ ಸಮಾಜವನ್ನೂ ಜತೆಗೆ ಕರೆದುಕೊಂಡು ಹೋಗು ಅಂತ ನನಗೆ ಆಶೀರ್ವಾದ ಮಾಡಿದ್ದಾರೆ ಎಂದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪಡೆದುಕೊಳ್ಳುವ ಹಸಿವಾಗಿದೆ. ಪಂಚಮಸಾಲಿ ಸಮುದಾಯದವರು ಹೃದಯಶೀಲರು. ಬಸವಣ್ಣನವರ ತತ್ವದಲ್ಲಿ ಮುನ್ನಡೆಯುತ್ತಿದ್ದೇವೆ. ಆದರೂ ನಮ್ಮ ಸಮಾಜಕ್ಕೆ ಅನ್ಯಾಯ ಆಗ್ತಿದೆ. ಆದರೆ ಸೂರ್ಯ ಮುಳುಗದ ಬ್ರಿಟಿಷರ ಸಾಮ್ರಾಜ್ಯಕ್ಕೆ ಸೆಡ್ಡು ಹೊಡೆದಿದ್ದೇವೆ. ಮೀಸಲಾತಿ ತೆಗೆದುಕೊಂಡೇ ತೀರುತ್ತೇವೆ. ನಮ್ಮ ಹೋರಾಟ ಮುಂದಿನ ಪೀಳಿಗೆಗೆ ಅವಶ್ಯಕತೆ ಇದೆ. ನನ್ನ ಸಮಾಜದಲ್ಲೂ ಕಾರ್ಮಿಕರು, ಶ್ರಮಿಕರು ಇದ್ದಾರೆ. ಮೂಗಿಗೆ ತುಪ್ಪ ಹಚ್ಚಿದ್ರೆ ನಡೆಯಲ್ಲ. ಕ್ಯಾಬಿನೆಟ್ನಲ್ಲಿ ಡಿಸಿಶನ್ ತಗೊಂಡ್ರೆ ನಡೆಯಲ್ಲ. ನಮಗೆ ಶಾಸನ ಆಗಬೇಕು. ರಾಷ್ಟ್ರಪತಿಗಳ ಅಂಕಿತ ಬೇಕು. ಚುನಾವಣೆ ಇದೆ ಎಂದು ಬಾಯಲ್ಲಿ ಹೇಳಿ ಬಿಟ್ರೆ ನಡೆಯಲ್ಲ. ಶಾಸನಬದ್ಧವಾಗಿ ನಮಗೆ ಮೀಸಲಾತಿ ಕೊಡಬೇಕು ಎಂದರು.
ಎಂಬಿ ಪಾಟೀಲ್ ಹೆಸರು ತೆಗೆಯುತ್ತಿದ್ದಂತೆ ಸಭೆಯಲ್ಲಿ ಗದ್ದಲ: ಮುಂದಿನ ಬಾರಿ ಹುಕ್ಕೇರಿ ಮತ ಕ್ಷೇತ್ರದಲ್ಲಿ ಪಂಚಮಸಾಲಿಗಳನ್ನೇ ಗೆಲ್ಲಿಸಿ ಎಂದು ಕಾಶಪ್ಪನವರ ಕರೆ ನೀಡಿ ಎಂಬಿ ಪಾಟೀಲ್ ಹೆಸರು ತೆಗೆಯುತ್ತಿದ್ದಂತೆ ಸಭೆಯಲ್ಲಿ ಗದ್ದಲ ಶುರುವಾಯಿತು. ಸಮಾವೇಶಕ್ಕೆ ಆಗಮಿಸಿದ ಸಭಿಕರೊಂದಿಗೆ ಕುಳಿತಿದ್ದ ಪೃಥ್ವಿ ಕತ್ತಿ ಮೇಲೆದ್ದು ಕೆಳಗೆ ಬಾ ಎಂದು ಸವಾಲು ಹಾಕಿದರು.
ವೇದಿಕೆಯ ಕೆಳಗೆ ಕುಳಿತು ಒಮ್ಮೆಲೆ ಮೇಲೆದ್ದು ಕಾಶಪ್ಪನವರ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿದರು. ಅವರು ರಮೇಶ್ ಕತ್ತಿಯವರ ಮಗ ಎಂದು ಕಾಶಪ್ಪನವರ ಅವರಿಗೆ ಸಭಿಕರು ಹೇಳಿದರು. ಯಾರ ಮಗನಾದರೆ ನನಗೇನು, ನಾನೂ ಸಹ ಒಬ್ಬ ಮಂತ್ರಿಯ ಮಗನೇ ಎಂದ ಕಾಶಪ್ಪನವರ ಪ್ರತಿಕ್ರಿಯೆ ನೀಡಿದರು. ಈ ವೇಳೆ ಕಾಶಪ್ಪನವರ ಹಾಗೂ ಪೃಥ್ವಿ ಕತ್ತಿ ವಾಗ್ವಾದದಿಂದ ಸಭೆಯಲ್ಲಿ ಗದ್ದಲ ಆರಂಭವಾಗುತ್ತಿದ್ದಂತೆ ಪೃಥ್ವಿ ಕತ್ತಿಯವರನ್ನು ಪೊಲೀಸರು ಹೊರ ಕರೆದುಕೊಂಡು ಹೋದರು.
ಇದನ್ನೂ ಓದಿ: 'ಎಸ್ಸಿ-ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇರ್ಬೇಕು ಎಂಬ ಹೋರಾಟ ಹಳೆಯದು'