ಬೆಳಗಾವಿ : ನಾನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹೋಗಿಲ್ಲ. ನಾನು ಡಿಸಿಎಂ ಡಿಕೆ ಶಿವಕುಮಾರ್ ಕರೆದ ಭೋಜನಕೂಟಕ್ಕೆ ಮಾತ್ರ ಹೋಗಿದ್ದು ಎಂದು ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ತಿಳಿಸಿದರು. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಾನು ನಿನ್ನೆ 8 ಗಂಟೆಯಿಂದ 10 ಗಂಟೆ ತನಕ ವಿಜಯೇಂದ್ರ ಜೊತೆಗೆ ಇದ್ದೆ. ನಮ್ಮ ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರು ಭೋಜನ ಕೂಟ ಇಟ್ಟುಕೊಂಡಿದ್ದರು. ಅವರ ಇಟ್ಟುಕೊಂಡಿದ್ದ ಔತಣಕೂಟದಲ್ಲಿ ನಾನು ಭಾಗಿಯಾಗಿ ಊಟ ಮಾಡಿದೆ. ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಹ ನನಗೆ ಊಟಕ್ಕೆ ಆಹ್ವಾನ ಕೊಟ್ಟಿದ್ದರು. ಹೀಗಾಗಿ 11 ಗಂಟೆಗೆ ಡಿಕೆಶಿ ಕರೆದ ಔತಣಕೂಟಕ್ಕೆ ತೆರಳಿ ವಿಷ್ ಮಾಡಿ ಬಂದೆ ಎಂದು ಸ್ಪಷ್ಟಪಡಿಸಿದರು.
ಲೋಕಸಭೆಗೆ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವ ಲೋಕಸಭೆ ಚುನಾವಣೆಗೂ ನಾನು ಸ್ಪರ್ಧೆ ಮಾಡಲ್ಲ. ಮೈಸೂರಿನಲ್ಲಿ ಸ್ಪರ್ಧೆ ಮಾಡುವಂತೆ ಒತ್ತಡ ಇದೆ. 2028ಕ್ಕೆ ಮತ್ತೆ ಶಾಸಕನಾಗಿ ಆಯ್ಕೆ ಆಗಬೇಕು ಅಂತಿದ್ದೇನೆ. ಬಿಜೆಪಿಗೆ ಮುಜುಗರವಾಗುವ ಕೆಲಸ ನಾನು ಮಾಡಲ್ಲ. ಆದರೆ ಒಂದು ವರ್ಗ ನನ್ನನ್ನೂ ಕಳಿಸೋಕೆ ಪ್ರಯತ್ನ ಮಾಡ್ತಿದೆ. ಎರಡು ವರ್ಷಗಳಿಂದ ನಿರಂತರ ಪ್ರಯತ್ನ ಮಾಡ್ತಿದ್ದಾರೆ. ನಾನು ಮೊನ್ನೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೂ ಹೋಗಿದ್ದೆ ಎಂದರು.
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಬಿಜೆಪಿ ಶಾಸಕರು ಭಾಗಿ : ಗುರುವಾರ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಬಿಜೆಪಿಯ ಮೂವರು ನಾಯಕರು ಕಾಣಿಸಿಕೊಂಡಿರುವುದು ಈಗ ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಸಭೆಯಲ್ಲಿ ಬಿಜೆಪಿ ಶಾಸಕರಾದ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್, ಹೆಚ್ ವಿಶ್ವನಾಥ್ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ ಕೆ ಶಿವಕುಮಾರ್, ಸೋಮಶೇಖರ್, ಶಿವರಾಮ್ ಹೆಬ್ಬಾರ್, ವಿಶ್ವನಾಥ್ ಎಲ್ಲರೂ ಇಲ್ಲಿ ಆಯೋಜಿಸಿದ್ದ ಔತಣಕೂಟಕ್ಕೆ ಬಂದಿದ್ದರು. ಬೇರೆ ಪಕ್ಷದ ಸುಮಾರು 10 ಶಾಸಕರನ್ನು ಔತಣಕೂಟಕ್ಕೆ ಆಹ್ವಾನಿಸಲಾಗಿತ್ತು. ಇವರ್ಯಾರು ಶಾಸಕಾಂಗ ಸಭೆಗೆ ಬಂದಿಲ್ಲ, ಊಟಕ್ಕೆ ಬಂದಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.
ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿ, ಊಟಕ್ಕೆ ಕರೆದಿದ್ದರು. ಅದಕ್ಕೆ ನಾವು ಅಲ್ಲಿಗೆ ಹೋಗಿದ್ದೆವು ಎಂದು ಎಸ್ ಟಿ ಸೋಮಶೇಖರ್ ನಮ್ಮಲ್ಲಿ ತಿಳಿಸಿದ್ದಾರೆ. ಅವರು ಪಕ್ಷದ ಯಾವುದೇ ಶಿಸ್ತನ್ನು ಉಲ್ಲಂಘನೆ ಮಾಡಿಲ್ಲ. ನಾನು ಕೂಡ ಅವರ ಬಳಿ ಮಾತನಾಡಿದ್ದೇನೆ. ಅಲ್ಲದೇ ನಿನ್ನೆ ಬಿಜೆಪಿ ನಡೆಸಿದ ಧರಣಿಯಲ್ಲೂ ಅವರು ಭಾಗವಹಿಸಿದ್ದರು. ಬೇರೆ ಏನೇ ಇದ್ದರೂ ಮಾತುಕತೆ ನಡೆಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ : ರೆಸಾರ್ಟ್ನಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಮೂವರು ಬಿಜೆಪಿ ಶಾಸಕರು ಹಾಜರು