ಅಥಣಿ: ಸಂಕ್ರಾಂತಿ ಹಬ್ಬದ ಆಸುಪಾಸಿನಲ್ಲಿ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪನವರು ಹೇಳಿಕೆ ನೀಡುತ್ತಿದ್ದಂತೆ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ತಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷ ಸೇರಿ ಒಂದು ವರ್ಷ ಕಳೆದರೂ ಬಹಿರಂಗವಾಗಿ ನಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಎಲ್ಲಿ ಕೂಡ ಹೇಳಿಲ್ಲ. ಸದ್ಯ ಸಚಿವ ಸಂಪುಟಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಈಟಿವಿ ಭಾರತ ಜೊತೆ ಮಾತನಾಡಿ, ತಮ್ಮ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ಉಪಚುನಾವಣೆಯಲ್ಲಿ ಗೆದ್ದ ಹನ್ನೆರಡು ಜನರಲ್ಲಿ, ಹನ್ನೊಂದು ಜನರಿಗೆ ಸಚಿವ ಸ್ಥಾನ ನೀಡಿದ್ದಾರೆ. ನನಗೆ ಯಾಕೆ ನೀಡಿಲ್ಲ ಎಂದು ಆಗಾಗ ಪ್ರಶ್ನೆ ಕಾಡುತ್ತದೆ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ರು.
ನನಗೆ ಸಚಿವ ಸ್ಥಾನ ನೀಡಿ ಎಂದು ಯಾರಿಗೆ ಒತ್ತಡ ಹೇರಿಲ್ಲ. ರಮೇಶ ಜಾರಕಿಹೊಳಿ ಮುಖಾಂತರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇನೆ. ಅದನ್ನು ಬಿಟ್ಟು ಸಚಿವ ಸ್ಥಾನಕ್ಕೆ ನಾನು ಲಾಬಿ ಮಾಡಿಲ್ಲ ಎಂದರು.
ಓದಿ:ಸಿಎಂ ಬದಲಾವಣೆ ಬಗ್ಗೆ ಡಿಕೆಶಿಗೆ ಕನಸು ಬಿದ್ದಿದ್ರೆ ಅವರನ್ನೇ ಕೇಳಿ: ಶಿವರಾಮ ಹೆಬ್ಬಾರ್
ಎಂಟಿಬಿ ನಾಗರಾಜ್, ಆರ್. ಶಂಕರ್, ಮುನಿರತ್ನ ಅವರನ್ನು ಸದ್ಯ ಸಚಿವ ಸಂಪುಟಕ್ಕೆ ಸೇರಿಸುತ್ತಾರೆ ಎಂದು ಮಾಹಿತಿ ನೀಡಿದರು. ನಾನು ಪದೇಪದೆ ಅವರಿಗೆ ಸಚಿವ ಸ್ಥಾನ ನೀಡಿ ಎಂದು ಕೇಳುವುದು ಸರಿಯಲ್ಲ.
ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನಕ್ಕೆ ಒತ್ತಡ ತರುತ್ತೇನೆ. ತಿರುಪತಿಗೆ ಹೋಗಿರುವುದಕ್ಕೆ ವಿಶೇಷ ಅರ್ಥ ಬೇಡ. ನಾನು ಸಹಜವಾಗಿ ದೇವರ ದರ್ಶನಕ್ಕೆ ಹೋಗಿದ್ದೆ. ಸಚಿವ ಸ್ಥಾನ ನೀಡಿಲ್ಲ ಎಂದು ಬೇಸರ ಇದೆ. ಕ್ಷೇತ್ರಕ್ಕೆ ಅನುದಾನ ಕೊಟ್ಟಿರುವುದಕ್ಕೆ ಸಂತೋಷವಿದೆ ಎಂದರು.