ಬೆಳಗಾವಿ: ಹಿಂದುಳಿದ ಕ್ಷೇತ್ರ ಎಂಬ ಬೆಳಗಾವಿ ಗ್ರಾಮೀಣ ಭಾಗದ ಹಣೆಪಟ್ಟಿಯನ್ನು ತೆಗೆದುಹಾಕಲು ಸಂಕಲ್ಪ ಮಾಡಿದ್ದೇನೆ. ಇದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಕ್ಷೇತ್ರಕ್ಕೆ ಅನುದಾನ ತರುತ್ತಿದ್ದೇನೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ತಾಲೂಕಿನ ಬಾಳೇಕುಂದ್ರಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರ ಹಿಂದಿನಿಂದಲೂ ಅಭಿವೃದ್ಧಿಯಿಂದ ವಂಚಿತವಾಗಿದೆ. ಬೆಳಗಾವಿ ನಗರದ ಮಗ್ಗುಲಲ್ಲೇ ಇದ್ದರೂ ಸರ್ಕಾರದ ಯಾವುದೇ ಸೌಲಭ್ಯ ಈ ಕ್ಷೇತ್ರಕ್ಕೆ ಸಿಗುತ್ತಿರಲಿಲ್ಲ. ಹೀಗಾಗಿ ಹಿಂದುಳಿದ ಕ್ಷೇತ್ರ ಎಂದು ಹೆಸರು ಬಂದಿದೆ.
ಇಲ್ಲಿಯ ಜನರು ಅಭಿವೃದ್ಧಿ, ಮೂಲ ಸೌಲಭ್ಯಗಳಿಂದ ವಂಚಿತರಾಗಲು ಏನು ಅನ್ಯಾಯ ಮಾಡಿದ್ದಾರೆ? ಎಲ್ಲಾ ಕಡೆ ಅಭಿವೃದ್ಧಿ ವೇಗವಾಗಿ ನಡೆಯುತ್ತಿದ್ದರೆ ನಾನು ಸುಮ್ಮನಿರಬೇಕೇ? ಒಂದು ದಿನವೂ ವಿಶ್ರಾಂತಿ ತೆಗೆದುಕೊಳ್ಳದೇ ಕ್ಷೇತ್ರದ ಜನರ ಸೇವೆ ಮಾಡುತ್ತಿದ್ದೇನೆ. ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಅನುದಾನ ತರುತ್ತಿದ್ದೇನೆ ಎಂದರು.
ಯಾರು ಏನೇ ಹೇಳಿದರೂ ನಾನು ಕ್ಷೇತ್ರದ ಜನರಿಗೋಸ್ಕರ ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ. ನನ್ನ ಗುರಿ ಒಂದೇ, ಅದು ಕ್ಷೇತ್ರದ ಅಭಿವೃದ್ಧಿ. ಜನರ ನೆಮ್ಮದಿಯಲ್ಲೇ ನಾನೂ ನೆಮ್ಮದಿ ಕಾಣುತ್ತೇನೆ. ನಿಮ್ಮ ಮುಖದಲ್ಲಿ ಶಾಶ್ವತವಾಗಿ ನಗು ಕಾಣುವುದೇ ನನ್ನ ಬಯಕೆ ಎಂದು ಹೇಳಿದರು.