ಬೆಳಗಾವಿ : ಗಣೇಶೋತ್ಸವ ಆಚರಣೆ ಬಗ್ಗೆ ತಜ್ಞರ ಸಲಹೆ ಮೇರೆಗೆ ಸಿಎಂ ಐದು ದಿನಗಳ ಆಚರಣೆಗೆ ಅನುಮತಿ ನೀಡಿ ಘೋಷಣೆ ಮಾಡಿದ್ದಾರೆ. ಹೀಗಾಗಿ, ನಾನು ಅದರ ಬಗ್ಗೆ ಏನೂ ಹೇಳಕ್ಕಾಗಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಬೆಳಗಾವಿಯಲ್ಲಿ ಹತ್ತು ದಿನ ಗಣೇಶೋತ್ಸವಕ್ಕೆ ಅನುಮತಿಸಲು ಆಗ್ರಹ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ತಜ್ಞರ ಸಲಹೆಯಂತೆ ಸರ್ಕಾರ ಕೋವಿಡ್ ನಿಯಮಾವಳಿ ಹೊರಡಿಸಿದೆ. ಇಡೀ ರಾಜ್ಯಕ್ಕೆ ಒಂದೇ ನಿಯಮಾವಳಿ ಅನುಸರಿಸಲು ಸಿಎಂ ಹೇಳಿದ್ದಾರೆ.
ಕೋವಿಡ್ 3ನೇ ಅಲೆ ಹರಡುವ ಸಂದರ್ಭದಲ್ಲಿ ಎಷ್ಟೇ ಎಚ್ಚರಿಯಿಂದ ಇದ್ರೂ ಸಾಲದು. ಜೀವ ಮೊದಲು, ಜೀವನ ಆಮೇಲೆ, ಜೀವ ಉಳಿಸುವ ಅವಶ್ಯಕತೆ ಇದೆ. ಹೀಗಾಗಿ, ಈಗಾಗಲೇ ಐದು ದಿನಗಳ ಗಣೇಶೋತ್ಸವ ಆಚರಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎಂದರು.
ಇನ್ನು, ನಿನ್ನೆ ಬೆಳಗಾವಿ ಜನ ಬಿಜೆಪಿಗೆ ಒಳ್ಳೆಯ ಫಲಿತಾಂಶ ಕೊಟ್ಟಿದ್ದಾರೆ. ಬೆಳಗಾವಿಯ ಮತದಾರರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು. ಇದು ಬಿಜೆಪಿ ಗೆಲುವಲ್ಲ ಇವಿಎಂ ಗೆಲುವು ಎಂಬ ಎಂಇಎಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸೋತವರು ಏನು ಮಾಡ್ತಾರೆ ಅದರ ಬಗ್ಗೆ ನಾನು ಹೇಳಕ್ಕಾಗಲ್ಲ. ಗೆದ್ರೆ ಸರಿ ಇದೆ, ಸೋತ್ರೆ ಅದು ಸರಿ ಇಲ್ಲ ಅಂತಾನಾ? ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.
ಗೃಹ ಸಚಿವರಾಗಿ ಮೊದಲ ಬಾರಿ ಬೆಳಗಾವಿ ಭೇಟಿ : ಬೆಳಗಾವಿಗೆ ಆಗಮಿಸಿದ ಗೃಹಸಚಿವ ಆರಗ ಜ್ಞಾನೇಂದ್ರ ತಾವು ಸಚಿವರಾದ ಬಳಿಕ ಇದೇ ಮೊದಲ ಬಾರಿ ಬೆಳಗಾವಿಗೆ ಭೇಟಿ ನೀಡಿದ್ದಾರೆ. ನಾಳೆ ಕೆಎಸ್‌ಆರ್‌ಪಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದಾರೆ. ಇಂದು ಸಚಿವರು ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದರು. ಬಳಿಕ ಅಲ್ಲಿಂದ ಎಸ್‌ಪಿ ಕಚೇರಿಗೆ ತೆರಳಿದ ಗೃಹಸಚಿವ ಅರಗ ಜ್ಞಾನೇಂದ್ರ ಜಿಲ್ಲಾ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ.