ಬೆಳಗಾವಿ: ಇಲ್ಲಿನ ಸಾರಥಿ ನಗರದಲ್ಲಿರುವ ವಸತಿ ಗೃಹವೊಂದನ್ನು ಮಸೀದಿಯಾಗಿ ಪರಿವರ್ತನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಬಿಜೆಪಿ ಮುಖಂಡರು ಮತ್ತು ಹಿಂದೂ ಕಾರ್ಯಕರ್ತರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಮಸೀದಿಯು ಅನಧಿಕೃತವಾಗಿದ್ದು ತೆರವು ಮಾಡುವಂತೆ ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಸಂಜಯ್ ಪಾಟೀಲ್, ಸಾರಥಿ ನಗರದ ಫಾತೀಮಾ ಮಸೀದಿಯನ್ನು ಅನಧಿಕೃತವಾಗಿ ನಿರ್ಮಿಸಿದ್ದರೂ ಸಹ ಇದರ ತೆರವಿಗೆ ಮಹಾನಗರ ಪಾಲಿಕೆ ಹಿಂದೇಟು ಹಾಕುತ್ತಿದೆ. ಪಾಲಿಕೆ ಆಯುಕ್ತರ ಮೇಲೆ ಶಾಸಕಿಯೊಬ್ಬರು ತೆರವು ಮಾಡದಂತೆ ಒತ್ತಡ ಹೇರುತ್ತಿದ್ದಾರೆ ಎಂದು ಅವರು ಆರೋಪ ಮಾಡಿದರು.
ಕರ್ನಾಟಕ ಸರ್ಕಾರದ ವಾಹನ ಚಾಲಕರ ಕೇಂದ್ರ ಸಂಘದ ವತಿಯಿಂದ ನಿರ್ಮಾಣವಾಗಿದ್ದ ಖಾಸಗಿ ಲೇಔಟ್ನಲ್ಲಿದ್ದ ನಿವೇಶನ ಸಂಖ್ಯೆ 19ನ್ನು ಮೌಲಾನಾ ಅಬ್ದುಲ್ ಕಲಾಂ ಆಜಾದ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಸೊಸೈಟಿಗೆ ನಿವೇಶನದ ಮೂಲ ಮಾಲೀಕರು ಗಿಫ್ಟ್ ಆಗಿ ನೀಡಿದ್ದರು. ಆದರೆ, ಈ ನಿವೇಶನದಲ್ಲಿ ಅನಧಿಕೃತವಾಗಿ ಫಾತೀಮಾ ಮಸೀದಿ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೇ ವಿಚಾರವಾಗಿ ಮಸೀದಿ ತೆರವು ಮಾಡುವಂತೆ 2022ರ ಜನವರಿ 17ರಂದು ಮಹಾನಗರ ಪಾಲಿಕೆಗೆ ಸಾರಥಿ ನಗರ, ವಿದ್ಯಾ ನಗರ ಮತ್ತು ಪೊಲೀಸ್ ಕಾಲೋನಿ ನಿವಾಸಿಗಳು ಮನವಿ ಮಾಡಿದ್ದರು.
ಈ ಸಂಬಂಧ ಕಾರಣ ಕೇಳಿ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಘಾಳಿ ಅವರು ನೋಟಿಸ್ ಸಹ ಜಾರಿ ಮಾಡಿದ್ದರು. ಮಹಾನಗರ ಪಾಲಿಕೆಯಿಂದ ನೀಡಿರುವ ಕಟ್ಟಡ ಪರವಾನಿಗೆ ಉಲ್ಲಂಘನೆ ಆರೋಪ ಮಾಡಲಾಗಿದೆ. ವಸತಿ ಉದ್ದೇಶಿತ ನಿವೇಶನದಲ್ಲಿ ಭೂಬಳಕೆ ಮಾರ್ಗಸೂಚಿ ಉಲ್ಲಂಘಿಸಲಾಗಿದೆ. ವಸತಿ ಕಟ್ಟಡದಲ್ಲಿ ಧಾರ್ಮಿಕ ಚಟುವಟಿಕೆ ನಡೆಸುತ್ತಿರುವ ಆರೋಪ ಸಂಬಂಧ 7 ದಿನಗಳೊಳಗೆ ಮಸೀದಿ ತೆರವಿಗೆ ಆಯುಕ್ತರು ತಾತ್ಕಾಲಿಕ ಆದೇಶ ಸಹ ಹೊರಡಿಸಿದ್ದರು. ಆದರೆ, ಇತ್ತ ನಿವೇಶನವು ವಕ್ಫ್ ಬೋರ್ಡ್ ಆಸ್ತಿ ಎಂದು ಮುಸ್ಲೀಂ ಮುಖಂಡರು ಹೇಳಿಕೊಂಡಿದ್ದರು.
ಸತ್ಯ ಇದಲ್ಲ. ವಸತಿ ನಿವೇಶನ ನಿಯಮ ಬಾಹಿರವಾಗಿಯೇ ವಕ್ಫ್ ಬೋರ್ಡ್‌ಗೆ ವರ್ಗಾವಣೆ ಮಾಡಲಾಗಿದೆ. ಮನೆ ನಿರ್ಮಾಣ ಮಾಡುವ ಅನುಮತಿ ಪಡೆದು ಮಸೀದಿ ನಿರ್ಮಾಣ ಮಾಡಲಾಗಿದೆ. ಈ ಮಸೀದಿ ಅಕ್ರಮ ಎಂಬುದು ಪಾಲಿಕೆ ಆಯುಕ್ತರು ಸೇರಿದಂತೆ ಎಲ್ಲರಿಗೂ ಗೊತ್ತಿದೆ. ಒಂದು ವರ್ಷದಿಂದ ತೆರವು ಮಾಡುತ್ತೇವೆ ಅಂತ ಹೇಳುತ್ತಲೇ ಬಂದಿದ್ದಾರೆ. ಆದರೆ, ನಾವು ಯಾವುದೇ ವ್ಯಕ್ತಿ, ಸಮಾಜದ ವಿರುದ್ಧ ಇಲ್ಲ. ಯಾವುದು ಅಕ್ರಮ ಇದೆಯೋ ಅದನ್ನು ಮಾತ್ರ ತೆರವು ಮಾಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಹೇಳಿದ್ದಾರೆ.
ಬಡಾವಣೆಯಲ್ಲಿ ಕೆಲವರು ಹಿಂದೂ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡುತ್ತಿದ್ದಾರೆ. ಬಹುಸಂಖ್ಯಾತ ಹಿಂದೂ ರಾಷ್ಟ್ರದಲ್ಲಿ ಹಿಂದೂಗಳ ಮೇಲೆ ಈ ರೀತಿ ಅನ್ಯಾಯವಾಗುತ್ತಿದೆ. ಇದನ್ನೆಲ್ಲ ನೋಡುತ್ತಾ ಕೂರುವವರು ನಾವಲ್ಲ. ನ್ಯಾಯವಾಗಿ ಇರುವುದನ್ನು ತೀರ್ಮಾನ ಮಾಡಿ ಅನ್ನೋದಷ್ಟೇ ನಮ್ಮ ವಿನಂತಿ. ತೀರ್ಮಾನ ಕೈಗೊಳ್ಳಲು ಸಮಯ ವ್ಯರ್ಥ ಮಾಡಿ ಜನರ ತಾಳ್ಮೆ ಪರೀಕ್ಷೆ ಮಾಡಬೇಡಿ. ಜನರ ಭಾವನೆಗೆ ಸ್ಪಂದಿಸಿ, ಯಾವುದು ಅಕ್ರಮ ಇದೆಯೇ ಅದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಸಹ ಆಗಬಾರದು ಅನ್ನೋದು ಸಹ ನಮ್ಮ ಆಶಯ. ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿಯನ್ನು ಮತ್ತೊಮ್ಮೆ ಭೇಟಿಯಾಗಿ ಈ ಬಗ್ಗೆ ವಿನಂತಿ ಮಾಡುತ್ತೇವೆ. ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಭಾಗದ ಶಾಸಕಿಯೊಬ್ಬರು ನಮ್ಮ ಮೇಲೆ ಒತ್ತಡ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ. ಅಧಿಕಾರಿ ಸುಳ್ಳು ಹೇಳುವ ಅವಶ್ಯಕತೆ ಇಲ್ಲ. ಶಾಸಕಿಗೆ ಅವರ ಮೇಲೆ ಅಷ್ಟು ಪ್ರೀತಿ ಇದ್ರೆ ಮನೆಯಲ್ಲಿ ವ್ಯವಸ್ಥೆ ಮಾಡಿ ಕೊಡಲಿ. ಜನರಿಗೆ ತೊಂದರೆ ಕೊಡುವಂತಹ ಕೆಲಸ ಯಾರು ಮಾಡಬಾರದು. ಒಂದು ಸಮಾಜದ ಮೇಲೆ ಪ್ರೀತಿ ಇನ್ನೊಂದು ಸಮಾಜದ ಮೇಲೆ ಅನ್ಯಾಯ ಸರಿಯಲ್ಲ ಎಂದು ಅವರು ಹೇಳಿದರು.
ಸೋಮವಾರ ರಾತ್ರಿ ಸಾರಥಿ ನಗರದಲ್ಲಿ ಈ ಬಗ್ಗೆ ಸಭೆ ನಡೆಸಲಾಗಿದ್ದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್, ಧನಂಜಯ ಜಾಧವ್, ಉಜ್ವಲಾ ಬಡವವನಾಚೆ, ದೀಪಾ ಕುಡಚಿ, ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇದಕ್ಕೂ ಮುನ್ನ ಮೊನ್ನೆ ನಡೆದ ವಿರಾಟ ಹಿಂದೂ ಸಮಾವೇಶದಲ್ಲಿ ಮಸೀದಿ ತೆರವಿಗೆ ಗಡುವು ನೀಡಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಎಂಟು ದಿನಗಳಲ್ಲಿ ಮಸೀದಿ ತೆರವು ಮಾಡಬೇಕು. ಮಾಡದಿದ್ದರೆ ಶ್ರೀರಾಮಸೇನೆ ನುಗ್ಗಿ ತೆರವು ಮಾಡುತ್ತೆ ಎಂದು ಎಚ್ಚರಿಕೆ ನೀಡಿದ್ದರು.
ನಿನ್ನೆಯ ಸಭೆ ನಿರ್ಣಯದಂತೆ ಜಿಲ್ಲಾಧಿಯನ್ನು ನಾವು ಭೇಟಿ ಮಾಡಿದ್ದೇವೆ. ಏನು ನ್ಯಾಯ ಇದೆ ಅದರ ಪ್ರಕಾರ ಕ್ರಮ ಕೈಗೊಳ್ಳಿ ಎಂದು ಮನವಿ ಸಹ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಪಾಸಿಟಿವ್ ರಿಸ್ಪಾನ್ಸ್ ಕೊಟ್ಟಿದ್ದು ಕಾನೂನು ಕ್ರಮದ ಭರವಸೆ ನೀಡಿದ್ದಾರೆ. ವಕ್ಫ್ ಬೋರ್ಡ್‌ಗೆ ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿದ್ದಾರೆ. ಮಹಾನಗರ ಪಾಲಿಕೆ ಕಟ್ಟಡ ನಿರ್ಮಾಣ ವೇಳೆ ಕೆಲ ನಿಬಂಧನೆ ವಿಧಿಸಿದ್ದಾರೆ. ಅದರ ಉಲ್ಲಂಘನೆ ಮಾಡಿದ್ರೆ ತೆರವು ಮಾಡಲಾಗುವುದು ಅಂತಾನೇ ಅದರಲ್ಲಿ ಇದೆ. ಹೀಗಾಗಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದೇವೆ. ಜಿಲ್ಲಾಧಿಕಾರಿಗಳು ತಕ್ಷಣ ನಗರ ಪೊಲೀಸ್ ಆಯುಕ್ತರು, ಮಹಾನಗರ ಪಾಲಿಕೆ ಆಯುಕ್ತರ ಜೊತೆ ಮಾತನಾಡಿದ್ದಾರೆ. ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದರು.
ಇದನ್ನೂ ಓದಿ: ಬೆಂಗಳೂರಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ.. ತಾಯಿ ಮಗ ಸಾವು, ಅಪ್ಪ ಮಗಳ ಸ್ಥಿತಿ ಗಂಭೀರ