ಅಥಣಿ: ತಾಲ್ಲೂಕಿನಲ್ಲಿ ಕೊರೊನಾ ಸಾವುಗಳು ಹೆಚ್ಚಾಗುತ್ತಿದ್ದಂತೆ ಅಥಣಿಗೆ ದೌಡಾಯಿಸಿದ ಶಾಸಕ ಮಹೇಶ್ ಕುಮಟಳ್ಳಿ, ಇಲ್ಲಿನ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಅಧಿಕಾರಿಗಳ ತುರ್ತು ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಅಷ್ಟೇ ಅಲ್ಲದೆ ಕೊರೊನಾ ಸಮುದಾಯಿಕವಾಗಿ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕಾದ ಹಿನ್ನೆಲೆ ಅಥಣಿ ಮಾರುಕಟ್ಟೆ ವ್ಯಾಪಾರಸ್ಥರು ಈಗಾಗಲೇ ಸ್ವಯಂ ಪ್ರೇರಿತ ಬಂದ್ಗೆ ಕರೆ ನೀಡಿದ್ದಾರೆ ಎಂದು ತಿಳಿಸಿದರು.
ಕೇವಲ ಸರ್ಕಾರ ಮತ್ತು ಅಧಿಕಾರಿಗಳಿಂದ ಕೊರೊನಾ ಹರಡುವಿಕೆ ತಡೆಯುವುದು ಅಸಾಧ್ಯ ಎನ್ನುವ ಸ್ಥಿತಿಯಲ್ಲಿ ನಾವಿದ್ದು ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಜನರು ಅನವಶ್ಯಕವಾಗಿ ಮನೆಯಿಂದ ಹೊರಗೆ ಬರಬಾರದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಿ ಸ್ಯಾನಿಟೈಸರ್ ಬಳಸುವ ಮೂಲಕ ಕೊರೊನಾ ವಾರಿಯರ್ಸ್ ಜೊತೆಗೆ ಮಾಹಿತಿ ಹಂಚಿಕೊಳ್ಳುವ ಮೂಲಕ ಸಹಕರಿಸಬೇಕು ಎಂದರು.
ತಾಲೂಕಿನ ಶಿವನೂರ, ಸಂಕೋನಟ್ಟಿ, ಸೇರಿದಂತೆ ಅಥಣಿ ಪಟ್ಟಣದ ಶಾಂತಿನಗರ, ಶಂಕರ ನಗರ, ಕನಕನಗರ, ಸಾಯಿನಗರ ಮತ್ತು ಗಸ್ತಿ ಗಲ್ಲಿಗಳಲ್ಲಿ ಈಗಾಗಲೇ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ ಎಂದು ತಿಳಿಸಿದರು.