ಬೆಳಗಾವಿ: ಕೃಷಿ ಪಂಪ್ ಸೆಟ್‌ಗಳಿಗೆ ಮೂಲಸೌಕರ್ಯ ಒದಗಿಸುವ ವೆಚ್ಚನ್ನು ರೈತರೇ ಭರಿಸಬೇಕು ಎಂಬ ಆದೇಶ ಪರಿಷ್ಕರಿಸುವ ಪ್ರಸ್ತಾವನೆ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಈ ಪ್ರಸ್ತಾವನೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ.
ಸುವರ್ಣಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಈ ಹಿಂದೆ ಕೃಷಿ ಪಂಪ್ ಸೆಟ್‌ಗಳಿಗೆ ಮೂಲಸೌಕರ್ಯ ಕಲ್ಪಿಸಲು, ವೆಚ್ಚವನ್ನು ರೈತರೇ ಭರಿಸಬೇಕು ಎಂದು ಸರಕಾರ ತೀರ್ಮಾನಿಸಿ, ಅ.7ಕ್ಕೆ ಆದೇಶ ಹೊರಡಿಸಿತ್ತು. ಇದಕ್ಕೆ ರೈತರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಆದ್ದರಿಂದ ಇಂಧನ ಇಲಾಖೆ ಅಧಿಕಾರಿಗಳಿಗೆ ಆದೇಶ ಮರು ಪರಿಶೀಲಿಸಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿತ್ತು. ರೈತರು ಕೃಷಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಪರಿವರ್ತಕ (ಟಿ.ಸಿ.) ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಅಗತ್ಯವಾಗುವ ವೆಚ್ಚವನ್ನು ರೈತರ ಬದಲಿಗೆ ಇಂಧನ ಇಲಾಖೆಗಳ ಎಸ್ಕಾಂಗಳೇ ಭರಿಸಬೇಕು ಎಂಬ ಪ್ರಸ್ತಾವನೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಜವಳಿ ಪಾರ್ಕ್ ಸಂಬಂಧ ವಿಶೇಷ ವಾಹಕ ರಚನೆ: ಕಲಬುರಗಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಪಿಎಂ ಮಿತ್ರ ಪಾರ್ಕ್ ಯೋಜನೆಯಲ್ಲಿ ಜವಳಿ ಪಾರ್ಕ್ ಸ್ಥಾಪನೆ ಸಂಬಂಧ ವಿಶೇಷ ವಾಹಕ ರಚಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ. ದೇಶಾದ್ಯಂತ ಏಳು ಸ್ಥಳಗಳಲ್ಲಿ ಜವಳಿ ಘಟಗಳನ್ನು ಸ್ಥಾಪಿಸುವ ಪ್ರಸ್ತಾಪ ಬಂದಾಗ ರಾಜ್ಯ ಸರಕಾರ ಕಲಬುರಗಿಯಲ್ಲಿ ಜವಳಿ ಪಾರ್ಕ್‌ಗೆ ಶಿಫಾರಸು ಮಾಡಿತ್ತು. ಇದೀಗ ಅನುಮೋದನೆ ನೀಡಿದೆ.
ಕೆ-ಶೋರ್ ಯೋಜನೆ: ಕರಾವಳಿ ಭಾಗದ ಜಲಮೂಲಗಳ ಮಾಲಿನ್ಯ ತಡೆಯಲು ಕೆ- ಶೋರ್ ಯೋಜನೆಯನ್ನು 840 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಮಟ್ಟದ ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗುತ್ತಿದೆ. ಜತೆಗೆ ವಿಶೇಷ ಉದ್ದೇಶಿತ ವಾಹಕ ರಚಿಸಲಾಗುತ್ತದೆ. ಈ ಯೋಜನೆಯು ವಿಶ್ವಬ್ಯಾಂಕ್ ಶೇ.70 - ಕರ್ನಾಟಕ ಸರಕಾರ ಶೇ.30 ರ ಸಹಯೋಗದಲ್ಲಿ ಅನುಷ್ಠಾನವಾಗಲಿದೆ.
ರಾಜ್ಯದಲ್ಲಿ ಕಳೆದ ಆರ್ಥಿಕ ಸಾಲಿನಲ್ಲಿ ಮಾ.23ರ ವೇಳೆಗೆ ಸಮುದ್ರ ಹಾಗೂ ಒಳನಾಡಿನ ವ್ಯಾಪ್ತಿಯಲ್ಲಿ 12.25 ಲಕ್ಷ ಟನ್ ಮೀನು ಉತ್ಪಾದನೆಯಾಗಿದೆ. ಈ ಪೈಕಿ 7.3 ಲಕ್ಷ ಟನ್ ಸಮುದ್ರ ಮೀನು. ಆದರೆ, ಪರಿಶೀಲನೆ ವೇಳೆ ಈ ಮೀನುಗಳ ದೇಹದಲ್ಲಿ ಮೈಕ್ರೋ ಪ್ಲಾಸ್ಟಿಕ್ ಇರುವಿಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸಮುದ್ರದಲ್ಲಿನ ಪ್ಲಾಸ್ಟಿಕ್ ಮಾಲಿನ್ಯ ಅಧ್ಯಯನ ನಡೆಸಿ ತೆಗೆಯಲು ಈ ಯೋಜನೆ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೂರು ಬಿಲ್ಗೆ ಸಂಪುಟ ಅಸ್ತು: ಅಧಿವೇಶನದಲ್ಲಿ ಮೂರು ವಿಧೇಯಕಗಳನ್ನು ಮಂಡಿಸಲು ಸಂಪುಟ ಸಭೆ ಹಸಿರು ನಿಶಾನೆ ನೀಡಿದೆ. ಬಿಬಿಎಂಪಿ ಮತ್ತು ಇತರ ಕಾನೂನು ತಿದ್ದುಪಡಿ ವಿಧೇಯಕ, ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ (ಯೋಜನೆ, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ತಿದ್ದುಪಡಿ ವಿಧೇಯಕ ಹಾಗೂ ಹಂಪಿ ವಿಶ್ವ ಪರಂಪರೆ ನಿರ್ವಹಣೆ ಪ್ರಾಧಿಕಾರ ತಿದ್ದುಪಡಿ ವಿಧೇಯಕ ಇದೇ ಅಧಿವೇಶನದಲ್ಲಿ ಮಂಡನೆಯಾಗಲಿದೆ.
ಸಂಪುಟ ಸಭೆಯ ಇತರ ತೀರ್ಮಾನಗಳು:
- ಬೆಂಗಳೂರಿನ ಸರಕಾರಿ ಯುನಾನಿ ಮತ್ತು ಹೋಮಿಯೋಪತಿ ಮಹಾವಿದ್ಯಾಲಯದ ಮಹಿಳಾ ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿಗೆ 12.13 ಕೋಟಿ ಪರಿಷ್ಕೃತ ಅಂದಾಜು ಮೊತ್ತಕ್ಕೆ ಒಪ್ಪಿಗೆ.
- ಆಯ್ದ 60 ತಾಲೂಕುಗಳಲ್ಲಿನ ವಿಜ್ಞಾನ ಸಂಯೋಜನೆ ಹೊಂದಿರುವ ಒಟ್ಟು 60 ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಪ್ರತಿ ಕಾಲೇಜಿಗೆ 83.30 ಲಕ್ಷ ರೂ.ಗಳಂತೆ ವೆಚ್ಚ ಮಾಡಿ ಆದರ್ಶ ಪದವಿ ಪೂರ್ವ ಕಾಲೇಜುಗಳನ್ನಾಗಿ ಪರಿವರ್ತಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
- ಉಳಿದಂತೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬಂಗಾರದ ಗಣಿ ಗ್ರಾಮದಲ್ಲಿನ ಒಟ್ಟು 962.20 ಎಕರೆ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಕೈಗಾರಿಕಾ ವಸಾಹತು ನಿರ್ಮಿಸಲು ಅಸ್ತು.
- ಶಿವಮೊಗ್ಗದಲ್ಲಿ 80 ಕೋಟಿ ವೆಚ್ಚದಲ್ಲಿ ಅತ್ಯುನ್ನತ ಕಾರಾಗೃಹ ಹಾಗೂ ವಸತಿಗೃಹ ನಿರ್ಮಾಣಕ್ಕೆ ಒಪ್ಪಿಗೆ.
- ಕಂದಾಯ ಇಲಾಖೆಯಲ್ಲಿರುವ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಕ್ಕೆ ಒಪ್ಪಿಗೆ.
- ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮಿಲೆಟ್ ವ್ಯಾಲ್ಯು ಚೈನ್ ಪಾರ್ಕ್ ನಿರ್ಮಾಣ ಮಾಡಲು 25 ಕೋಟಿ ರೂ.ಗೆ ಅಸ್ತು.
- ವಿಜಯಪುರ ಜಿಲ್ಲಾ ಕಚೇರಿಗಳ ಸಂಕೀರ್ಣ ಕಟ್ಟಡ ಕಾಮಗಾರಿಗೆ 49 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಅಸ್ತು.
- ರಾಜ್ಯದಲ್ಲಿ ಮುದ್ರಾಂಕ ಶುಲ್ಕ ಹೆಚ್ಚಳ ಮಾಡುವ ಕುರಿತ ಮುದ್ರಾಂಕ ಶುಲ್ಕ ತಿದ್ದುಪಡಿ ವಿಧೇಯಕ-2023ನ್ನು ಉಭಯ ಸದನಗಳಲ್ಲಿ ಮಂಡನೆ ಮಾಡಿ ಅನುಮೋದನೆ ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ಘಟನೋತ್ತರ ಅನುಮತಿ ಪಡೆಯಲಾಗಿದೆ.
ಇದನ್ನೂ ಓದಿ: ವಿಧಾನಸಭೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೂಗು: ಜಿಲ್ಲೆಯ ಶಾಸಕರಲ್ಲಿ ಮೂಡದ ಒಮ್ಮತ!