ಬೆಳಗಾವಿ: ಭೀಕರ ಪ್ರವಾಹಕ್ಕೆ ತುತ್ತಾದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ರಾಜ್ಯಾದ್ಯಂತ ವಿವಿಧ ರೀತಿಯಲ್ಲಿ ಸಹಾಯ ದೊರೆಯುತ್ತಿದ್ದು, ಬೆಳಗಾವಿಯ ಕೆಲ ಸಂಘಟನೆಗಳು ರಕ್ತದಾನ ಮಾಡುವ ಮೂಲಕ ನೆರೆ ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದ್ದಾರೆ.
ನಗರದ ಸಾಹಿತ್ಯ ಭವನದಲ್ಲಿ ವಂದೇಮಾತರಂ ವೇದಿಕೆ ಹಾಗೂ ಕರ್ನಾಟಕ ನವನಿರ್ಮಾಣ ಸೇನೆ ಸಂಯುಕ್ತಾಶ್ರಯದಲ್ಲಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ಸಹಾಯ ಮಾಡುವ ಉದ್ದೇಶದಿಂದ ರಕ್ತದ ಯುನಿಟ್ ನೀಡಲಾಯಿತು. ಪ್ರವಾಹ ಸಂದರ್ಭದಲ್ಲಿ ಅನಾರೋಗ್ಯದಿಂದ ಅನೇಕ ಸಂತ್ರಸ್ತರು ಬಳಲುತ್ತಿದ್ದು ಅವರಿಗೆ ನೆರವಾಗುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಗಳ ಮುಖ್ಯಸ್ಥರು ತಿಳಿಸಿದರು.
ಮಾರ್ಕೆಟ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎನ್.ವಿ. ಭರಮನಿ ಮಾತನಾಡಿ, ಪ್ರವಾಹಕ್ಕೆ ಒಳಗಾದ ಪ್ರದೇಶಗಳಿಗೆ ರಾಜ್ಯಾದ್ಯಂತ ಅನೇಕ ವಸ್ತುಗಳನ್ನು ನೀಡಲಾಗಿದೆ. ಆದರೆ, ಇಲ್ಲಿಯವರೆಗೂ ಯಾರು ಈ ರೀತಿ ರಕ್ತವನ್ನು ದಾನ ಮಾಡಿರಲಿಲ್ಲ. ಸ್ವಯಂ ಸೇವಾ ಸಂಸ್ಥೆಗಳು ಈ ರೀತಿಯ ಕೆಲಸ ಮಾಡುತ್ತಿರುವುದರಿಂದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಉಪಯುಕ್ತವಾಗಿದೆ ಎಂದರು.