ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಾರ್ಕಂಡೇಯ ನದಿ ಮೈದುಂಬಿ ಹರಿಯುತ್ತಿದೆ. ಕಳೆದ ರಾತ್ರಿ ತಾಲೂಕಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಆಗಿದ್ದರಿಂದ ಮಾರ್ಕಂಡೇಯ ನದಿಗೆ ಒಳಹರಿವು ಜಾಸ್ತಿ ಆಗಿದೆ.
ಇದರಿಂದಾಗಿ ಬೆಳಗಾವಿ ತಾಲೂಕಿನ ಕಂಗ್ರಾಳಿಯಲ್ಲಿರುವ ಹಳೆಯ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ನದಿ ಪಾತ್ರದಲ್ಲಿ ಅಪಾರ ಪ್ರಮಾಣದಲ್ಲಿ ರೈತರು ಬೆಳೆದ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ತಾಲೂಕಿನ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗುತ್ತಿರುವುದರಿಂದ ಒಳಹರಿವು ಹೆಚ್ಚಾಗುವ ಭೀತಿ ಇರುವುದರಿಂದ ರೈತರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.
ಬೆಳಗಾವಿ ತಾಲೂಕಿನಲ್ಲಿ ಹರಿದು ನಂತರ ಘಟಪ್ರಭಾ ನದಿ ಸೇರುವ ಈ ಮಾರ್ಕಂಡೇಯ ನದಿಗೆ ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಬಳಿ ಜಲಾಶಯಗಳಿವೆ. ಈ ಜಲಾಶಯಗಳಿಂದ ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗುತ್ತದೆ. ಆದ್ರೆ ವ್ಯಾಪಕ ಮಳೆಯಿಂದ ಮಾರ್ಕಂಡೇಯ ಜಲಾಶಯ ಸಂಪೂರ್ಣ ಭರ್ತಿಯಾಗುತ್ತಿದ್ದು, ನದಿ ಪಾತ್ರದ ಜನರ ಆತಂಕಕ್ಕೆ ಕಾರಣವಾಗಿದೆ.