ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕುಡಚಿ ಸೇತುವೆ ಜಲಾವೃತವಾಗಿದೆ. ಪರಿಣಾಮ ಕರ್ನಾಟಕ - ಮಹಾರಾಷ್ಟ್ರ ಸಂಪರ್ಕ ಬಂದ್ ಆಗಿದೆ.
ಬೆಳಗಾವಿ ಜಿಲ್ಲೆಯ ಕಾಗಾವಾಡ ತಾಲೂಕಿನ ಕುಡಚಿ ಸೇತುವೆ ಹಾಗು ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಮೇಲೆ ಎರಡು ಅಡಿ ನೀರು ಬಂದಿದೆ.
ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ :
ಬಾಗಲಕೋಟ, ಜಮಖಂಡಿ, ಮುಧೋಳ, ಮಹಾಲಿಂಗಪುರ, ಹಾರೂಗೇರಿ ಸೇರಿದಂತೆ ಹಲವಾರು ಪಟ್ಟಣಗಳನ್ನು ಸಂಪರ್ಕಿಸಿ ವ್ಯಾಪಾರ ವಹಿವಾಟು ನಡೆಸಲು ಈ ರಸ್ತೆ ಅತ್ಯಂತ ಅನುಕೂಲವಾಗಿತ್ತು. ಈ ಮಾರ್ಗ ಕಡಿತಗೊಂಡ ಹಿನ್ನೆಲೆಯಲ್ಲಿ ಹಾರೂಗೇರಿ ಕ್ರಾಸ್ ಮಾರ್ಗವಾಗಿ ಅಥಣಿ, ಕಾಗವಾಡ, ಮಾರ್ಗವಾಗಿ 50 ಕಿ.ಮೀ ಹೆಚ್ಚಿಗೆ ಕ್ರಮಿಸಿ ತೆರಳುವ ಪರಿಸ್ಥಿತಿ ಬಂದೊದಗಿದ್ದು ಜನರಿಗೆ ಕೊಂಕಣ ಸುತ್ತಿ ಮೈಲಾರಕ್ಕೆ ಹೋದ ಅನುಭವವಾಗುತ್ತಿದೆ.
ಈ ಉಗಾರ - ಕುಡಚಿ ಸೇತುವೆ ಮಹಾ-ಕರ್ನಾಟಕದ ಕೊಂಡಿಯಾಗಿ ಸಂಚರಿಸುವ ಏಕೈಕ ಮಾರ್ಗವಾಗಿದ್ದು ಈ ಮಾರ್ಗದಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಈ ಮಾರ್ಗ ಬಂದ್ ಆಗಿದ್ದು ಈಗ ಮಹಾರಾಷ್ಟ್ರಕ್ಕೆ ಹೋಗಬೇಕಾದ ಸಂಪರ್ಕ ಇಲ್ಲದಂತಾಗಿದೆ.
ಈ ಮಾರ್ಗದ ಮೂಲಕ ಬಾಗಲಕೋಟ, ಜಮಖಂಡಿ, ಮುಧೋಳ ನಿವಾಸಿಗಳು ಮಹಾರಾಷ್ಟ್ರದ ಮೀರಜ್ ಪಟ್ಟಣಕ್ಕೆ ನಿತ್ಯ ಅಪಾರ ಸಂಖ್ಯೆಯಲ್ಲಿ ಪ್ರಯಾಣ ಬೆಳೆಸುತ್ತಾರೆ. ಆದ್ರೀಗ ಈ ಸಂಪರ್ಕ ಸ್ಥಗಿತಗೊಂಡಿದ್ದು ಈ ಭಾಗದ ಜನ ಪರದಾಡುವಂತಾಗಿದೆ.
ಸೇತುವೆಯನ್ನು ಮೇಲ್ದರ್ಜೆಗೇರಿಸಿ ಹೊಸ ಸೇತುವೆ ನಿರ್ಮಾಣ ಮಾಡಿ ಎಂದು ಹಲವಾರು ಬಾರಿ ಮನವಿ ಮಾಡಿದರೂ ಸಹ ಜನ ಪ್ರತಿನಿಧಿಗಳು ಕಾಳಜಿವಹಿಸಿಲ್ಲ ಎಂದು ಇಲ್ಲಿನ ಸ್ಥಳೀಯರು ದೂರಿದ್ದಾರೆ.