ಚಿಕ್ಕೋಡಿ : ಭಾರಿ ಮಳೆಯಿಂದಾಗಿ ಸಂಕೇಶ್ವರ ಪಟ್ಟಣದ ಲಕ್ಷ್ಮಿ ಹಳ್ಳ ತುಂಬಿ ಹರಿಯುತ್ತಿದ್ದು, ಮಳೆ ನೀರು ಪಟ್ಟಣದ ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಧಾನ್ಯಗಳು, ದಿನಬಳಕೆ ವಸ್ತುಗಳು ಹಾಳಾಗಿವೆ.
ಅಬ್ಬರದ ಮಳೆಯಿಂದ ನಗರದ ಹಲವು ಮನೆಗಳು ಹಾಗೂ ರೈಲ್ವೆ ಪೊಲೀಸ್ ಠಾಣೆಗೂ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮನೆಗಳಿಗೆ ನುಗ್ಗಿದ ನೀರನ್ನು ಹೊರ ಹಾಕಲು ಕುಟುಂಬಸ್ಥರ ಹರಸಾಹಸ ಪಡುತ್ತಿದ್ದಾರೆ. ಇನ್ನು ಮಳೆಯಲ್ಲಿ ನೆನೆಯುತ್ತಲೇ ರೈಲ್ವೆ ಪೊಲೀಸ್ ಸಿಬ್ಬಂದಿ ರಾತ್ರಿ ಕೆಲಸ ಮಾಡುತ್ತಿದ್ದಾರೆ. ಗಣಕಯಂತ್ರ, ಸಿಪಿಯುಗಳನ್ನು ಠಾಣೆ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಮಳೆ ನೀರಿನ ರಭಸಕ್ಕೆ ಸಂಕೇಶ್ವರ ಪಟ್ಟಣದ ಹಳ್ಳದಲ್ಲಿ ಕ್ರೂಸರ್ ಒಂದು ನೀರಿನಲ್ಲಿ ಕೊಚ್ಚಿ ಹೋಗಿದೆ. ಒಟ್ಟಾರೆ ವರುಣನ ಅಬ್ಬರಕ್ಕೆ ಜಿಲ್ಲೆಯ ಜನತೆಯ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಧಾರಾಕಾರ ಮಳೆಗೆ ಮನೆ ಕುಸಿದು ವ್ಯಕ್ತಿ ಸಾವು:
ಖಾನಾಪುರ ತಾಲೂಕಿನ ಕಸಮಳಗಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ಮನೆ ಕುಸಿದು ಲಿಯಾಕತ್ ಮಕಾನದಾರ (55) ಎಂಬಾತ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ನಂದಗಡ ಪಿಎಸ್ಐ ಸುಮಾ ನಾಯಕ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತರ ಪಾರ್ಥೀವ ಶರೀರವನ್ನು ಖಾನಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.