ಚಿಕ್ಕೋಡಿ: ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತದ ಸೂಚನೆ ಮೇರೆಗೆ ಚಿಕ್ಕೋಡಿ ಉಪ ವಿಭಾಗದ ಕೆಲ ತಾಲೂಕಿನಲ್ಲಿರುವ ನದಿ ತೀರದ ಗ್ರಾಮಸ್ಥರು ಗ್ರಾಮಗಳನ್ನು ಖಾಲಿ ಮಾಡುತ್ತಿದ್ದಾರೆ.
ಮಹಾರಾಷ್ಟ್ರ ಭಾಗದಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹಾಗೇ ಉತ್ತರ ಕರ್ನಾಟಕ ಭಾಗದಲ್ಲೂ ಮಳೆಯಾಗುತ್ತಿದೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ಮುಖಾಂತರ ಕೃಷ್ಣಾ ನದಿಗೆ ನೀರು ಬಿಡುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪ ವಿಭಾಗದ ಕೆಲ ತಾಲೂಕುಗಳ ನದಿ ತೀರದ ಗ್ರಾಮಸ್ಥರು ಗ್ರಾಮಗಳನ್ನು ಖಾಲಿ ಮಾಡುತ್ತಿದ್ದಾರೆ.
ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ. ಕೆಲವರು ಪರಿಹಾರ ಕೇಂದ್ರದತ್ತ ತೆರಳಿದರೆ, ಇನ್ನು ಕೆಲವರು ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದಾರೆ. ಸುಮಾರು ನೂರಕ್ಕೂ ಹೆಚ್ಚು ವಾಹನಗಳಲ್ಲಿ ತಮ್ಮ ದಿನ ಬಳಕೆ ಸಾಮಗ್ರಿಗಳನ್ನು, ದನಕರುಗಳನ್ನು ತೆಗೆದುಕೊಂಡು ಗ್ರಾಮಸ್ಥರು ಊರು ಬಿಡುತ್ತಿದ್ದಾರೆ.