ಬೆಳಗಾವಿ: ಬೈಲಹೊಂಗಲ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುಡುಗು ಸಹಿತ ಮಿಂಚಿನೊಂದಿಗೆ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಬೆಳೆ ಜಲಾವೃತವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಕಳೆದ ನಾಲ್ಕೈದು ದಿನಗಳಿಂದಲೂ ಬೆಳಗ್ಗೆಯಿಂದ ಮಧ್ಯಾಹ್ನದ ತನಕ ತೀವ್ರ ಬಿಸಿಲು ಇದ್ದರೂ ಮಧ್ಯಾಹ್ನದ ನಂತರ ಬರುವ ಮಳೆರಾಯನ ಆರ್ಭಟಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬೆಳೆದ ಬೆಳೆಗಳು ಕೊಚ್ಚಿಕೊಂಡು ಹೋಗಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪಟ್ಟಣದಲ್ಲಿ ಸುರಿದ ಭಾರೀ ಮಳೆಯಿಂದ ಬಹುತೇಕ ಹಳ್ಳ, ಗಟಾರಗಳಲ್ಲಿದ್ದ ತ್ಯಾಜ್ಯವೆಲ್ಲಾ ಮಳೆ ನೀರಿನ ರಭಸಕ್ಕೆ ಕೊಚ್ಕೊಂಚಿಡು ಹೋಗಿದ್ದು, ತಾಲೂಕಿನ ಮಲ್ಲಮ್ಮನ ಬೆಳವಡಿ, ಕೆಂಗಾನೂರ, ಗರಜೂರ, ಜಾಲಿಕೊಪ್ಪ, ಆನಿಗೋಳ, ನಯಾನಗರ, ವಕ್ಕುಂದ, ಕೊರವಿನಕೊಪ್ಪ, ಇಂಗಳಗಿ, ಹೊಸೂರ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ರಾತ್ರಿವರೆಗೂ ಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಜಮೀನುಗಳೆಲ್ಲ ಜಲಾವೃತವಾಗಿವೆ.