ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿದೆ. ಇದರಿಂದ ಕೆರೆ ಕಟ್ಟೆಗಳು ಒಡೆದಿವೆ ಮತ್ತು ಸೇತುವೆಗಳು ಮುಳುಗಡೆಯಾಗಿ ಜನರನ್ನು ಪ್ರವಾಹದ ಭೀತಿಗೆ ಸಿಲುಕಿಸಿವೆ.
ಮಲಪ್ರಭಾ ನದಿಯಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಣಾಮ, ನದಿ ಮಧ್ಯದಲ್ಲಿರುವ ಶರಣೆ ಗಂಗಾಂಬಿಕಾ ಐಕ್ಯಮಂಟಪದ ಸುತ್ತ ಪ್ರವಾಹ ಉಂಟಾಗಿದೆ. ನಗರಕ್ಕೆ ಹೊಂದಿಕೊಂಡಿರುವ ಮುತ್ಯಾನಟ್ಟಿ ಗ್ರಾಮದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೆರೆ ಒಡೆದು, ಕೆರೆಯ ಪಕ್ಕದಲ್ಲಿರುವ ನೂರಾರು ಎಕರೆ ಕೃಷಿ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 4 ರ ಪಕ್ಕದ ಹಳೆ ಸೇತುವೆ ಮುಳುಗಡೆಯಾಗಿದ್ದು, ಜನರ ಸಂಚಾರಕ್ಕೆ ಅಡಚಣೆಯಾಗಿದೆ. ಅಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಗದ್ದೆಗಳಿಗೂ ನೀರು ನುಗ್ಗಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕೆರೆ ಕಟ್ಟೆಗಳು ತುಂಬಿದ್ದು ನೀರಿನ ಮಟ್ಟ ಹೆಚ್ಚಾಗುತ್ತಿದೆ. ವರುಣನ ಆರ್ಭಟ ಇದೇ ರೀತಿ ಮುಂದುವರೆದರೆ ಜನರಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಮನವಿಯಾಗಿದೆ.