ಅಥಣಿ: ಉತ್ತರ ಕರ್ನಾಟಕದ ಭಾಗದಲ್ಲಿ ಮಳೆ ಅಬ್ಬರ ಜೋರಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿರುವ ಪರಿಣಾಮ ತಾಲೂಕಿನ ತೇಲಸಂಗ ಗ್ರಾಮದಲ್ಲಿ ಹಳ್ಳ ದಾಟಲು ಗ್ರಾಮಸ್ಥರು ಜೀವದ ಹಂಗು ತೊರೆದು ಹಗ್ಗದ ಸಹಾಯದಿಂದ ರಸ್ತೆ ದಾಟುತ್ತಿದ್ದಾರೆ.
ತೇಲಸಂಗ ಮಾರ್ಗವಾಗಿ ವಿಜಯಪುರ ಜಿಲ್ಲೆಯ ಬಿಜ್ಜರಗಿ ಪಟ್ಟಣಕ್ಕೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಜೀವದ ಹಂಗು ತೊರೆದು ಹರಿಯುವ ನೀರಿನಲ್ಲಿ ಹರಸಾಹಸಪಟ್ಟು ಡೋಣಿ ಹಳ್ಳ ದಾಟಬೇಕಾಗಿದೆ. ಸ್ವಲ್ಪ ಯಾಮಾರಿದರು ಸಹ ಜೀವ ಹಾನಿ ಸಂಭವಿಸುವುದು ಖಚಿತ ಎನ್ನುತ್ತಾರೆ ಗ್ರಾಮಸ್ಥರು.
ತೇಲಸಂಗ ಗ್ರಾಮವು ಶಾಸಕ ಮಹೇಶ್ ಕುಮಟಳ್ಳಿ ಅವರ ಸ್ವಗ್ರಾಮವಾಗಿದೆ. ಇಲ್ಲಿ ಪ್ರತಿ ವರ್ಷ ಮಳೆಯಾದರೆ ಈ ಹಳ್ಳ ದಾಟಲು ಹರಸಾಹಸಪಡಬೇಕಾಗುತ್ತದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಮನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಅಗ್ನಿಶಾಮಕ ದಳ ಕಳಿಸಬೇಕು ಎಂದು ಆಗ್ರಹಿಸಿದ್ದಾರೆ.