ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ಮುಂದುವರೆದ ಮಳೆಯಿಂದಾಗಿ ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳ ನೀರಿನ ಹರಿವಿನಲ್ಲಿ ಎರಡು ಅಡಿಯಷ್ಟು ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ತಾಲೂಕಿನ ಮಾಂಜರಿ-ಅಂಕಲಿ ಸಂಪರ್ಕಿಸುವ ಕೃಷ್ಣಾ ನದಿ ಸೇತುವೆಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭೇಟಿ ನೀಡಿದರು.
ಚಿಕ್ಕೋಡಿ ತಾಲೂಕಿನ ಮಾಂಜರಿ, ಯಡೂರು, ಕಲ್ಲೋಳ ಗ್ರಾಮಕ್ಕೆ ಭೇಟಿ ನೀಡಿ ನದಿ ತೀರದ ಜನರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದರು. ಈಗಾಗಲೆ 1 ಲಕ್ಷ 10 ಸಾವಿರ ಕ್ಯೂಸೆಕ್ ನೀರು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಹರಿದು ಬರುತ್ತಿದೆ. ಸಂಭವನೀಯ ಪ್ರವಾಹ ಎದುರಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ತಾಲೂಕಾಡಳಿತಕ್ಕೆ ಸೂಚಿಸಿದರು.
ಮಳೆಯ ಅಬ್ಬರದಿಂದ ಚಿಕ್ಕೋಡಿ ಉಪವಿಭಾಗದ ಒಟ್ಟು 7 ಕೆಳ ಹಂತದ ಸಂಪರ್ಕ ಸೇತುವೆಗಳು ಜಲಾವೃತ್ತಗೊಂಡಿವೆ. ನಿಪ್ಪಾಣಿ ತಾಲೂಕಿನ ವೇದಗಂಗಾ ನದಿಯ ಜತ್ರಾಟ್-ಭೀವಶಿ, ಅಕ್ಕೋಳ-ಸಿದ್ನಾಳ, ಮಮದಾಪೂರ-ಹುಣ್ಣರಗಿ, ಭೋಜವಾಡಿ-ಕೊಣ್ಣೂರ ಹಾಗೂ ಕಾರದಗಾ-ಭೋಜ, ಗ್ರಾಮದ ಸಂಪರ್ಕ ಸೇತುವೆ ಮುಳುಗಡೆಯಾಗಿದೆ.
ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿಯ ಸಂಕೇಶ್ವರ-ನಾಗನೂರ ಹಾಗೂ ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ ಬ್ರಿಡ್ಜ್ ಕಂ ಬಾಂದಾರ ಕೂಡ ಮುಳುಗಡೆಯಾಗಿದೆ. ಹಾಗಾಗಿ ನದಿ ತೀರದ ಗ್ರಾಮಗಳ ಜನರು ಸುತ್ತುವರೆದು ಸಂಚಾರ ಮಾಡುವ ಪರಿಸ್ಥಿತಿ ಎದುರಾಗಿದೆ.
ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಒಟ್ಟು 1 ಲಕ್ಷ 10 ಸಾವಿರ ಕ್ಯೂಸೆಕ್ ನೀರು ಒಳಹರಿವಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ದತ್ತ ದೇವಸ್ಥಾನ ಹಾಗೂ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಬಂಗಾಲಿ ಬಾಬಾ ದೇವಸ್ಥಾನಗಳಿಗೆ ಮಳೆನೀರು ನುಗ್ಗಿದೆ. ಜಿಲ್ಲಾಧಿಕಾರಿಯವರು ಅಥಣಿ, ರಾಯಬಾಗ, ನಿಪ್ಪಾಣಿ, ಹಾಗೂ ಚಿಕ್ಕೋಡಿ ತಾಲೂಕಿನ ನದಿ ತೀರಕ್ಕೆ ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ: ಪ್ರಾಕೃತಿಕ ವಿಕೋಪ ಸಂದರ್ಭ ಜನರ ರಕ್ಷಣೆ: ಹಾರಂಗಿಯಲ್ಲಿ ಗಮನ ಸೆಳೆದ 'ಪ್ರಾತ್ಯಕ್ಷಿಕೆ'