ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆಯೊಂದು ನೆಲಕ್ಕುರಳಿದ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಮಂಗನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲಿದ್ದ ವೃದ್ಧ ದಂಪತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗನಕೊಪ್ಪ ಗ್ರಾಮದ ಸಂಜು ಜೈನ ಎಂಬುವರಿಗೆ ಸೇರಿದ ಮನೆ ಮಳೆಗೆ ಕುಸಿದಿದೆ. ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಖಾನಾಪುರ ತಾಲೂಕಿನಲ್ಲಿ ಕಳೆದೊಂದು ವಾರದಿಂದ ಸುರಿಯಿತ್ತಿರುವ ಭಾರೀ ಮಳೆಗೆ ಹಲವು ಸೇತುವೆಗಳು ಮುಳುಗಡೆಯಾಗಿವೆ. ಮಲಪ್ರಭಾ ಹಾಗೂ ಪಾಂಡ್ರಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿವೆ. ಖಾನಾಪುರದ ನದಿ ತೀರದ ಜನತೆ ಪ್ರವಾಹದ ಭೀತಿಯಲ್ಲಿದ್ದಾರೆ.
ಕಳೆದ ಮೂರು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಕುಂದಾನಗರಿ ತತ್ತರಿಸಿದೆ. ಮನೆಗಳು ಹಾಗೂ ಬಡಾವಣೆಗೆ ನೀರು ನುಗ್ಗಿದ್ದು, ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನಗರದ ಹೊರವಲಯದ ಯಳ್ಳೂರು ರಸ್ತೆ, ಆನಂದ ನಗರ, ವಡಗಾವಿ ಪ್ರದೇಶ ಅರ್ಧದಷ್ಟು ಮುಳುಗಡೆ ಆಗಿವೆ. ರಾತ್ರಿಯಿಡೀ ಮಳೆ ಸುರಿದಿದ್ದರಿಂದ ಮನೆಗಳಿಗೆ ನೀರು ನುಗ್ಗಿದ್ದು, ಮೂರು ಕಾಲೋನಿಗಳು ಭಾಗಶಃ ಜಲಾವೃತಗೊಂಡಿವೆ. ಇಲ್ಲಿನ ನಿವಾಸಿಗಳು ನೀರಲ್ಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ವರ್ಷ ಪ್ರವಾಹದ ವೇಳೆ ಇದೇ ಕಾಲೋನಿಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಮಹಾನಗರ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಮತ್ತೆ ಈ ಮನೆಗಳಿಗೆ ನೀರು ನುಗ್ಗಿದೆ. ಟಿಳಕವಾಡಿಯ ಕಾಂಪ್ಲೆಕ್ಸ್ ಗಳಿಗೂ ನೀರು ನುಗ್ಗಿದೆ. ಮಳಿಗೆ ವ್ಯಾಪಾರಿಗಳು ನೀರನ್ನು ಹೊರಹಾಕುತ್ತಿದ್ದಾರೆ. ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.