ಬೆಳಗಾವಿ: ಬೆಳಗಾವಿಯ ಬಿಜೆಪಿಯಲ್ಲಿ ಯಾವುದೇ ರೀತಿಯ ಬಣ ರಾಜಕೀಯ ಇಲ್ಲ ಎಂದು ವಾಯವ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ನಾಳೆ ಮೇ 21ರಂದು ಬೆಳಗಾವಿಯಲ್ಲಿ ಬಿಜೆಪಿ ಪಕ್ಷದ ಎಲ್ಲ ಹಿರಿಯರನ್ನು, ನಾಯಕರ ಸಭೆಯನ್ನು ಕರೆಯಲಾಗಿದೆ. ಮುಂಬರುವ ಚುನಾವಣೆ ಕುರಿತಂತೆ ಸುದೀರ್ಘ ಚರ್ಚೆಯನ್ನು ಮಾಡಲಾಗುತ್ತದೆ.
ಅದರಲ್ಲಿ ಪ್ರಮುಖವಾಗಿ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆ ನಾಯಕರ ಜೊತೆಗೆ ಸಭೆಯನ್ನು ಆಯೋಜನೆ ಮಾಡಲಾಗಿದೆ. ನಗರದ ಖಾಸಗಿ ಹೋಟೆಲ್ನಲ್ಲಿ ನಡೆಯುವ ಈ ಸಭೆಗೆ ಮೂರು ಜಿಲ್ಲೆಗಳ ಸಚಿವರು, ಶಾಸಕರು ಹಾಗೂ ಸಂಸದರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ನಿರಾಣಿ ಸಹೋದರರ ವಿರುದ್ಧ ಯತ್ನಾಳ್ ನಿರಂತರ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ನಮ್ಮ ಪಕ್ಷದ ಹಿರಿಯ ನಾಯಕರು. ಬಿಜೆಪಿಯಲ್ಲಿ ಯಾವುದೇ ರೀತಿಯ ಬಣ ರಾಜಕಾರಣವಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ವೈಯಕ್ತಿಕವಾಗಿ ಯತ್ನಾಳ್ ಅವರೊಂದಿಗೆ ಏನಾದರೂ ಇರಬಹುದು. ಆದರೆ, ರಾಜಕೀಯವಾಗಿ ಯತ್ನಾಳ್ ನಮ್ಮ ನಾಯಕರು ಎಂದು ಅವರು ತಿಳಿಸಿದರು.
ಓದಿ: ಪಿಎಸ್ಐ ಪರೀಕ್ಷೆ: ದಿವ್ಯಾ ಹಾಗರಗಿ, ಆರ್ಡಿ ಪಾಟೀಲ್ ಸೇರಿ ನಾಲ್ವರಿಗೆ ಸಿಗದ ಜಾಮೀನು