ಬೆಳಗಾವಿ: ಗೌಂಡವಾಡ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಮೀಸಲಿರಿಸಿದ್ದ ಜಾಗವನ್ನು ಪರಭಾರೆ ಮಾಡಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ತಾಲೂಕಿನ ಗೌಂಡವಾಡದಲ್ಲಿ ಸರ್ವೇ ನಂಬರ್ 78ರಲ್ಲಿ 1 ಎಕರೆ 26 ಗುಂಟೆ ಹಾಗೂ 88ರ ಸರ್ವೇಯಲ್ಲಿ 1 ಎಕರೆ 27 ಗುಂಟೆ ಜಾಗವನ್ನು ದೇವಸ್ಥಾನ ನಿರ್ಮಿಸಲು ಇನಾಮು ನೀಡಲಾಗಿದೆ. ಆದ್ರೆ, ಕೆಲವರು ದೇವಸ್ಥಾನದ ಜಾಗವನ್ನು ಬಿಟ್ಟು ಉಳಿದ ಭೂಮಿಯನ್ನು ಫ್ಲಾಟ್ ಮಾಡಿ ಮಾರಲು ಹುನ್ನಾರ ನಡೆಸಿದ್ದಾರೆ. ಹೀಗಾಗಿ ಇದನ್ನು ತಡೆದು ಈ ಜಾಗವನ್ನು ದೇವರ ಹೆಸರಿನಲ್ಲಿಯೇ ಭೂಮಿಯನ್ನು ನೋಂದಣಿ ಮಾಡಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಇನ್ನು ದೇವಸ್ಥಾನ ನಿರ್ಮಾಣದ ಹೆಸರಿನಲ್ಲಿ ನೀಡಿರುವ ಇನಾಮು ಜಾಗ ಗ್ರಾಮದ ಹಕ್ಕಾಗಿ ಉಳಿಯಬೇಕು. ಫ್ಲಾಟ್ ಮಾಡಿ ಮಾರುವುದರಿಂದ ಬೇರೆಯವರ ವಶಕ್ಕೆ ನೀಡಿದಂತೆ ಆಗುತ್ತದೆ. ಇದನ್ನು ತಪ್ಪಿಸಲು ದೇವರ ಹೆಸರಿನಲ್ಲಿ ಭೂಮಿಯನ್ನು ನೋಂದಣಿ ಮಾಡಬೇಕು ಎಂದು ಒತ್ತಾಯಿಸಿದರು.