ಬೆಳಗಾವಿ: ಇಂದಿನ ಕಾಲಘಟ್ಟದಲ್ಲಿ ಯುವ ಪತ್ರಕರ್ತರಿಗೆ ಹಿರಿಯ ಪತ್ರಕರ್ತರು ನೈಜ ವರದಿಗಳ ಬರವಣಿಗೆಗೆ ಮಾರ್ಗದರ್ಶನ ನೀಡಿದರೆ ಸಮಾಜ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.
ನಗರದ ವಾರ್ತಾ ಭವನದಲ್ಲಿ ನಡೆದ ಪತ್ರಕರ್ತರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪತ್ರಕರ್ತರ ಸಂಘದಿಂದ ವಿವಿಧ ಸಮಾಜದ ಮುಖಂಡರ, ಹಿರಿಯರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡರೆ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುತ್ತದೆ. ಸಂಘಟನೆ ಎನ್ನುವುದು ಸಮಾಜ, ಸರ್ಕಾರ ಹಾಗೂ ಮಾಧ್ಯಮದ ಕೊಂಡಿಯಾಗಿ ಉತ್ತಮ ವೇದಿಕೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಒಂದು ಮನೆಯಲ್ಲಿರುವ ಸದಸ್ಯರಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗುವುದು ಸಹಜ. ಆದರೆ ಸಂಘಟನೆಯಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಸಂಘ ಬೆಳೆಸಬೇಕು. ಸಂಘಟನೆಗೆ ಜಿಲ್ಲಾಡಳಿತದಿಂದ ಸೂಕ್ತ ಸಹಕಾರ ನೀಡುವುದಾಗಿ ಡಿಸಿ ಡಾ. ಎಸ್.ಬಿ.ಬೊಮ್ಮನಹಳ್ಳಿ ಭರವಸೆ ನೀಡಿದರು.
ಸಾನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿ ಮಾತನಾಡಿ, ಪತ್ರಕರ್ತರ ಕೆಲಸ ಪರಿಶ್ರಮದ ಕೆಲಸವಾಗಿದೆ. ಕಠಿಣ ಸಂದರ್ಭಗಳಲ್ಲಿ ವರದಿಯನ್ನು ಮಾಡುವ ಪತ್ರಕರ್ತರಿಗೆ ಸರ್ಕಾರಗಳ ಅನುಕಂಪ ಕಡಿಮೆ. ಬೇರೆ ಬೇರೆ ಸಂಘಟನೆಗಳಿಗೆ ನೀಡುವ ಅನುಕಂಪವನ್ನು ಸಮಾಜದ ಸೇವೆಯಲ್ಲಿ ತೊಡಗಿರುವ ಪತ್ರಕರ್ತರ ಬಗ್ಗೆ ಸಮಾಜ ಹಾಗೂ ಸರ್ಕಾರಗಳು ಯೋಚಿಸಬೇಕಾಗಿದೆ ಎಂದರು.